ಉಡುಪಿ: ಬಾಲ ಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳನ್ನು ಪತ್ತೆ ಹಚ್ಚಿ ಅವರನ್ನು ದುಡಿಮೆಯಿಂದ ಮುಕ್ತಗೊಳಿಸಿ, ಸೂಕ್ತ ಪುರ್ನವಸತಿ ಕಲ್ಪಿಸಿ, ವಿದ್ಯಾಭ್ಯಾಸಕ್ಕೆ ಸಕಲ ವ್ಯವಸ್ಥೆಗಳನ್ನು ಒದಗಿಸುವ ಮೂಲಕ ಬಾಲ ಕಾರ್ಮಿಕ ಪದ್ದತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು
ಅವರು ಇಂದು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ , ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಇತ್ತೀಚಿನ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಪರಿಶೀಲಿಸಿದಾಗ ಹಲವು ಮಕ್ಕಳು ತಮ್ಮ ಕುಟುಂಬ ನಿರ್ವಹಣೆಗೆ ಕೆಲಸ ಮಾಡುವುದರ ಜೊತೆಗೆ ವಿದ್ಯಾಭ್ಯಾಸದಲ್ಲಿ ಅಸಾಧಾರಣ ಸಾಧನೆ ತೋರಿರುವುದನ್ನು ಕಾಣಬಹುದಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿಸದೇ ಅವರ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು.
ಅವರ ಬಾಲ್ಯದ ಹಕ್ಕುಗಳನ್ನು ರಕ್ಷಿಸಿ, ಅವರ ಕಣ್ಣುಗಳಲ್ಲಿ ಬಾಲ್ಯದ ಮುಗ್ದತೆ ಮೂಡಿಸಬೇಕು. ಅವರಿಗೆ ಸಮಾಜದ ಬಗ್ಗೆ ಭಯದ ವಾತಾವರಣ ಮೂಡುವ ಬದಲು ಮತ್ತು ನಂಬಿಕೆಯನ್ನು ಮೂಡಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಸಂಘ ಸಂಸ್ಥೆಗಳು, ಜಿಲ್ಲೆಯ ಎಲ್ಲಾ ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು ಹಾಗೂ ಸರಕಾರಿ ಇಲಾಖೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.
ಜಿಲ್ಲೆಯಲ್ಲಿ ಬಾಲ ಕಾರ್ಮಿಕರನ್ನು ಪತ್ತೆ ಹಚ್ಚುವ ಸಲುವಾಗಿ ಕಾರ್ಮಿಕ ಇಲಾಖೆವತಿಯಿಂಸ ಸಮೀಕ್ಷೆಯನ್ನು ನಡೆಸಲಾಗುತ್ತಿದ್ದು, ಬಾಲ ಕಾರ್ಮಿಕರು ಪತ್ತೆಯಾದಲ್ಲಿ ಅವರಿಗೆ ಸೂಕ್ತ ಪುರ್ನವಸತಿ ಮತ್ತು ವಿದ್ಯಾಭ್ಯಾಸ ನೀಡಲಾಗುವುದು. ಸಾರ್ವಜನಿಕರು ಜಿಲ್ಲೆಯ ಯಾವುದೇ ಪ್ರದೇಶದಲ್ಲಿ ಬಾಲ ಕಾರ್ಮಿಕರು ಕಂಡುಬಂದಲ್ಲಿ ಉಚಿತ ಸಹಾಯವಾಣಿ ಸಂಖ್ಯೆ 1098 ತಕ್ಷಣ ಮಾಹಿತಿ ನೀಡುವಂತೆ ತಿಳಿಸಿದರು.
ಬಾಲ ಕಾರ್ಮಿಕ ಪದ್ದತಿ ವಿರೋಧ ಕುರಿತಂತೆ ಪ್ರತಿಜ್ಞಾ ವಿಧಿ ಭೋಧಿಸಿದ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಮಾತನಾಡಿ, ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಇದಕ್ಕಾಗಿ 20,000 ರಿಂದ 50,000 ಗಳ ವರೆಗೆ ದಂಡ, 6 ತಿಂಗಳಿನಿಂದ 2 ವರ್ಷ ದವರೆಗೆ ಜೈಲು ಶಿಕ್ಷೆ ಅಥವಾ ಈ ಎರಡನ್ನೂ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದರು.
ಕರಾವಳಿ ಅಭಿವೃಧ್ದಿ ಪ್ರಾದಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಇಲ್ಲವಾಗಿದ್ದು, ಜಿಲ್ಲೆಗೆ ಉದ್ಯೋಗ ನಿಮಿತ್ತ ಆಗಮಿಸುವ ವಲಸೆ ಕಾರ್ಮಿಕರ ಮಕ್ಕಳು ಈ ಪದ್ದತಿಗೆ ಬಲಿಯಾಗುತ್ತಿದ್ದು, ಈ ಮಕ್ಕಳನ್ನು ಗುರುತಿಸಿ, ಸೂಕ್ತ ಪುರ್ನವಸತಿ ಮತ್ತು ಸರಕಾರದ ವಿವಿಧ ಯೋಜನೆಗಳ ಪ್ರಯೋಜನವನ್ನು ಒದಗಿಸಿ,ಅವರನ್ನು ಸುಶಿಕ್ಷಿತರನ್ನಾಗಿ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಮಾತನಾಡಿ, ಜಿಲ್ಲೆಯಲ್ಲಿ ವಲಸೆ ಕಾರ್ಮಿಕರ ಮಕ್ಕಳು , ಕೊಳಚೆ ಪ್ರದೇಶದಲ್ಲಿರುವ ಮಕ್ಕಳು ಹಾಗೂ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದು ಅವರನ್ನು ಗುರುತಿಸಿ, ಸೂಕ್ತ ವಿದ್ಯಾಭ್ಯಾಸ, ಪುರ್ನವಸತಿ ಒದಗಿಸುವುದು ಪ್ರಜ್ಞಾವಂತ ನಾಗರೀಕರ ಕರ್ತವ್ಯವಾಗಿದ್ದು, ಇಂತಹ ಮಕ್ಕಳು ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವುದರ ಮೂಲಕ ಈ ಪದ್ದತಿಯ ನಿರ್ಮೂಲನೆಗೆ ಸಹಕರಿಸಬೆಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವೀಣಾ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ ನಾಯಕ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ, ಈ ಹಿಂದೆ ಬಾಲ ಕಾರ್ಮಿಕರಾಗಿ ಪತ್ತೆಯಾಗಿ ಪ್ರಸ್ತುತ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಶೈಕ್ಷಣಿಕ ಪರಿಕಗಳನ್ನು ಹಸ್ತಾಂತರಿಸಲಾಯಿತು.
ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ದತಿ ನಿರ್ಮೂಲನೆ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕಾರ್ಯಕ್ರಮ ಮತ್ತು ಎಂ.ಎಸ್.ಡಬ್ಲ್ಯೂ ಕಾಲೇಜು ವಿದ್ಯಾರ್ಥಿಗಳಿಂದ ಅರಿವು ಮೂಡಿಸುವ ಮೂಕಾಭಿನಯ ಪ್ರದರ್ಶನ ನಡೆಯಿತು.
ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಮಿಕ ನಿರೀಕ್ಷಕ ರಾಜಶೇಖರ ರೆಡ್ಡಿ ವಂದಿಸಿದರು.