ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಐ.ಕ್ಯೂ.ಎ.ಸಿ. ಹಾಗೂ ರಾಜಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಮಣಿಪಾಲ ವಿಶ್ವವಿದ್ಯಾನಿಲಯದ ಯುರೋಪಿಯನ್ ಸೆಂಟರ್ ಫಾರ್ ಸ್ಟಡೀಸ್ ಸಹಯೋಗದಲ್ಲಿ ಭಾರತ ಹಾಗೂ ಐರೋಪ್ಯ ಒಕ್ಕೂಟದ ಅಂತರ್‌ಶಿಸ್ತು ಆಧ್ಯಯನದಡಿಯಲ್ಲಿ ಯುಕ್ರೇನ್-ರಷ್ಯಾ ಯುದ್ಧ: ಭಾರತ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರತಿಕ್ರಿಯೆಯನ್ನು ಚರ್ಚಿಸುವ ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಯಿತು.
ಮಾಹೆಯ ಸಿ.ಇ.ಎಸ್ ಸಹಾಯಕ ಪ್ರಾಧ್ಯಾಪಕರಾದ ಪ್ರಿಯಾ ಮತ್ತು ಡಾ. ಯತಾರ್ಥ್ ಯುಕ್ರೇನ್-ರಷ್ಯಾ ಯುದ್ಧದ ಹಿನ್ನಲೆ, ಕಾರಣಗಳು, ನ್ಯಾಟೋ ರಾಷ್ಟ್ರಗಳ ಪ್ರತಿಕ್ರಿಯೆ, ಶಸ್ತ್ರಾಸ್ತ ರಾಜಕರಣ, ಜಾಗತಿಕ ಮಟ್ಟದಲ್ಲಿ ವ್ಯಕ್ತವಾದ ಪ್ರತಿಕ್ರಿಯೆ, ವಿಶ್ವಸಂಸ್ಥೆಯ ವೈಫಲ್ಯತೆಗಳು, ಪುಟಿನ್-ಜೆಲೆನ್ಸಿಕಿ ವ್ಯಕ್ತಿತ್ವ-ಜನಾಭಿಪ್ರಾಯ ಹಾಗೂ ಭಾರತದ ನಿಲುವು ಇತ್ಯಾದಿ ವಿಷಯಗಳ ಕುರಿತಾಗಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ಚರ್ಚೆಯಲ್ಲಿ ಅಂತರಾಷ್ಟ್ರೀಯ
ಸಂಬಂಧಗಳನ್ನು ಅಧ್ಯಯನ ಮಾಡುವ ರಾಜಕೀಯಶಾಸ್ತ್ರ ಪದವಿ ವಿದ್ಯಾರ್ಥಿಗಳ ಜೊತೆಗೆ ಅಂಗ್ಲಭಾಷೆಯ ಹಾಗೂ ಅರ್ಥಶಾಸ್ತ್ರದ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗಿಯಾದರು.
ಚರ್ಚೆಯಲ್ಲಿ ಮಾಹೆಯ ಮಾನವಿಕ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಪ್ರವೀನ್ ಶೆಟ್ಟಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ಮತ್ತು ಸಿ.ಇ.ಎಸ್. ಪ್ರಾಜೆಕ್ಟ್ ಕೊರ್ಡಿನೇಟರ್ ಜಸ್ಟಿನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಚಾಲನೆಯಿತ್ತ ಪ್ರಾಂಶುಪಾಲರಾದ ಡಾ. ಸುರೇಶ್ ರೈ ಕೆ. ಜಾಗತಿಕ ರಾಜಕೀಯ ವ್ಯವಸ್ಥೆಯ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿರುವ ರಷ್ಯಾ-ಯುಕ್ರೇನ್ ಯುದ್ಧ ಮತ್ತು ಇದರ ಸಾಧಕ- ಬಾಧಕಗಳ ಚರ್ಚೆ ವಿದ್ಯಾರ್ಥಿಗಳ ಅಧ್ಯಯನದ ದೃಷ್ಟಿಕೋನದಲ್ಲಿ ಪ್ರಸ್ತುತ ಮತ್ತು ಭಾರತದ ನಿಲುವಿನ ಸ್ಪಷ್ಟ ಅರಿವು ಮಾಡಿಕೊಳ್ಳಬೇಕೆಂದರು.
ಕಾಲೇಜಿನ ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ. ಮೇವಿ ಮಿರಾಂದ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು. ರಾಜಕೀಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರಶಾಂತ್ ನೀಲಾವರ, ಉಪನ್ಯಾಸಕರಾದ ರವಿ ಚಿತ್ರಾಪುರ ಕಾರ್ಯಕ್ರಮ ಆಯೋಜಿಸಿದರು. ಬೋಧಕ- ಬೋಧಕೇತರ ವೃಂದದವರು ಉಪಸ್ಥಿತರಿದ್ದು ಸಹಕರಿಸಿದರು.