ಉಡುಪಿ: ದಿನಾಂಕ 12-05-2022 ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡಿರುವ ಉಡುಪಿ ಜಿಲ್ಲೆಯಲ್ಲಿ ಹರಿಯುತ್ತಿರುವ ಸ್ವರ್ಣಾ ನದಿಗೆ ಉಡುಪಿ ತಾಲೂಕಿನ ಉಪ್ಪೂರು, ಪರಾರಿ ಮತ್ತು ಹಾವಂಜೆ ಭಾಗದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ / ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಿಸಿ ಏತ ನೀರಾವರಿ ಮೂಲಕ ಸುತ್ತಮುತ್ತಲಿನ ಕೆರೆ ಕಟ್ಟೆಗಳನ್ನು ತುಂಬಿಸಿ ಸುಮಾರು 1 ಸಾವಿರ ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ರೂ. 165.00 ಕೋಟಿ ಮೊತ್ತದ ಯೋಜನೆಯ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಅಧಿಕೃತ ಸರ್ಕಾರಿ ಆದೇಶ ಹೊರಡಿಸಲಾಗಿದೆ.
ಸ್ವರ್ಣಾ ನದಿಯು ಸಮುದ್ರವನ್ನು ಸೇರುವ ಉಡುಪಿ ತಾಲೂಕಿನ ಉಪ್ಪೂರು ಭಾಗದಲ್ಲಿ ಸಮುದ್ರದ ಉಪ್ಪು ನೀರು ಹಿಮ್ಮುಖವಾಗಿ ನದಿಯಲ್ಲಿ ಬರುವುದರಿಂದ ಸ್ಥಳೀಯವಾಗಿ ಹಲವಾರು ಭಾಗಗಳಲ್ಲಿ ಕೃಷಿ ಭೂಮಿಗಳಿಗೆ ಹಾನಿಯಾಗುವ ಜೊತೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಉಂಟಾಗುತ್ತಿರುವುದರಿಂದ ಈ ಯೋಜನೆ ಇಲ್ಲಿನ ಜನತೆಯ ಹಲವಾರು ವರ್ಷಗಳ ಬೇಡಿಕೆಯಾಗಿತ್ತು.
ಅದರಂತೆ ಸ್ವರ್ಣಾ ನದಿಗೆ ಅಡ್ಡಲಾಗಿ ಉಪ್ಪೂರು, ಪರಾರಿ ಮತ್ತು ಹಾವಂಜೆ ಗ್ರಾಮಗಳ ಹತ್ತಿರ ಬ್ರಿಡ್ಜ್ ಕಂ ಬ್ಯಾರೇಜ್ / ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಿಸಿ ಅಂತರ್ಜಲ ಅಭಿವೃದ್ಧಿ ಮತ್ತು ಏತ ನೀರಾವರಿ ಮೂಲಕ ಸುತ್ತಮುತ್ತಲಿನ ಕೆರೆ ಕಟ್ಟೆಗಳನ್ನು ತುಂಬಿಸಿ ಸುಮಾರು 1 ಸಾವಿರ ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಕಾಮಗಾರಿಗಳನ್ನು ಎರಡು ಹಂತ (ಹಂತ – 1 ರಲ್ಲಿ ರೂ. 115.00 ಕೋಟಿ. ಹಂತ – 2 ರಲ್ಲಿ ರೂ. 50.00 ಕೋಟಿ)ಗಳಲ್ಲಿ ಕೈಗೊಳ್ಳಲು ರೂ. 165.00 ಕೋಟಿ ಮೊತ್ತದ ಯೋಜನೆಯ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಜನತೆಯ ಬಹುಬೇಡಿಕೆಯ ಈ ಬೃಹತ್ ಯೋಜನೆ ಅನುಮೋದನೆಗಾಗಿ ಸರ್ಕಾರದ ಮಟ್ಟದಲ್ಲಿ ಶಾಸಕ ರಘುಪತಿ ಭಟ್ ಅವರು ನಿರಂತರವಾಗಿ ಪ್ರಯತ್ನಿಸಿದ್ದರು. ಈ ಯೋಜನೆಯಲ್ಲಿ ಹಾವಂಜೆ ಭಾಗದ ಮೂರು ಕೆರೆಗಳನ್ನು ತುಂಬಿಸುವುದು ಮತ್ತು ಮಣಿಪಾಲದ ಮಣ್ಣಪಳ್ಳ ಕೆರೆಯನ್ನು ತುಂಬಿಸುವುದು ಸೇರಿರುತ್ತದೆ.
ಜನತೆಯ ಬಹುವರ್ಷಗಳ ಬೇಡಿಕೆಯನ್ನು ಈಡೇರಿಸಿದ ಮುಖ್ಯಮಂತ್ರಿಯವರಾದ ಶ್ರೀಯುತ ಬಸವರಾಜ್ ಬೊಮ್ಮಾಯಿ ಹಾಗೂ ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರಿಗೆ ಶಾಸಕ ಕೆ. ರಘುಪತಿ ಭಟ್ ಅಭಿನಂದನೆ ಸಲ್ಲಿಸಿದ್ದಾರೆ.