ಉಡುಪಿ: ವಿದ್ಯಾರ್ಥಿಗಳು ಯಾವಾಗಲೂ ಖುಷಿಯಾಗಿರಬೇಕು. ಶಾಲಾ ಜೀವನವನ್ನು ಆನಂದಿಸಬೇಕು, ಆಗ ಮಾತ್ರ ಹೆಚ್ಚಿನ ಕಲಿಕೆ ಸಾಧ್ಯ. ಒತ್ತಡಯುತ ಮನಸ್ಸಿನಿಂದ ಕಲಿಕೆ ಸಾಧ್ಯವಿಲ್ಲ ಎಂದು ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಅಭಿಪ್ರಾಯಪಟ್ಟರು.
ಅವರು ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡೆದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಶಾಲಾ ಜೀವನದಲ್ಲಿ ಒದಗಿಬರುವ ಸ್ಪರ್ಧೆಗಳು, ಆಟೋಟ ಪಾಠಗಳು, ಪರೀಕ್ಷೆಗಳು ಮನೋರಂಜನೆಗಳು ಇವೆಲ್ಲವನ್ನು ಆನಂದದಿಂದ ಅನುಭವಿಸಲು ಅವರು ಕರೆ ನೀಡಿದರು.
ಎಸ್ ಡಿ ಎಂ ಸಿ ಗೌರವಾಧ್ಯಕ್ಷೆ ತಾರಾ ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಎಂಸಿ ಸದಸ್ಯರಾದ ಲತಾ, ಸಬಿಹಾ, ಶೇಖರ್ ಕೋಟ್ಯಾನ್, ವಿನೋದ, ನಾಗೇಶ್ ಇನ್ನಿತರರು ಭಾಗವಹಿಸಿ 2022-23 ನೇ ಸಾಲಿನ ಪಠ್ಯಪುಸ್ತಕಗಳನ್ನು ವಿತರಿಸಿದರು. ನಿವೃತ್ತ ಶಿಕ್ಷಕ ಸಂಪತ್ ಕುಮಾರ್ ಪಾಂಗಾಳ ಮಕ್ಕಳಿಗೆ ಉಚಿತವಾಗಿ ಅಟ್ಲಾಸ್ ವಿತರಿಸಿ ಅದರ ಉಪಯೋಗ ತಿಳಿಸಿ ಶುಭ ಹಾರೈಸಿದರು.
ಶಿಕ್ಷಕ ಶೇಖರ್ ಬೋವಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜ್ಯೋತಿ ವಂದಿಸಿದರು.