ಉಡುಪಿ: ಮಹಾಲಕ್ಷ್ಮೀ ಕೋ ಓಪರೇಟಿವ್ ಬ್ಯಾಂಕ್ ಲಿ., ಉಡುಪಿ ಇದರ 2020- 21ರ ಆರ್ಥಿಕ ವರ್ಷದ 43ನೇ ವಾರ್ಷಿಕ ಮಹಾಸಭೆಯು ಬ್ಯಾಂಕಿನ ಅಧ್ಯಕ್ಷರಾದ ಯಶ್‌ಪಾಲ್ ಎ ಸುವರ್ಣರವರ ಅಧ್ಯಕ್ಷತೆಯಲ್ಲಿ ಉಡುಪಿ ಪುರಭವನದಲ್ಲಿ ಇಂದು ಜರುಗಿತು.
ಬ್ಯಾಂಕಿನ ಅಧ್ಯಕ್ಷರಾದ ಯಶ್‌ಪಾಲ್ ಎ ಸುವರ್ಣರವರು ಸರ್ವ ಸದಸ್ಯರನ್ನು ಸ್ವಾಗತಿಸಿ, ಮಹಾಲಕ್ಷ್ಮೀ ಕೋ ಓಪರೇಟಿವ್ ಬ್ಯಾಂಕ್ ನಿರಂತರ 12 ವರ್ಷಗಳಿಂದ ಶೇ. 18 ಡಿವಿಡೆಂಡ್ ಘೋಷಣೆಯ ಮೂಲಕ ಕರಾವಳಿ ಭಾಗದ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬ್ಯಾಂಕು ಎಲ್ಲಾ ಕ್ಷೇತ್ರಗಳಲ್ಲೂ ಗಣನೀಯ ಪ್ರಗತಿ ಸಾಧಿಸಿದ್ದು, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಗ್ರಾಹಕ ಸ್ನೇಹಿಯಾಗಿ ವ್ಯವಹಾರ ನಡೆಸುತ್ತಿದೆ. ವಿಶೇಷವಾಗಿ ಮೀನುಗಾರರಿಗೆ, ಕೃಷಿಕರಿಗೆ ಸರಕಾರದ ವಿವಿಧ ಯೋಜನೆಗಳಾದ ಶೂನ್ಯ ಬಡ್ಡಿದರದ ಸಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಸಬ್ಸಿಡಿಯನ್ನು ನಮ್ಮ ಬ್ಯಾಂಕಿನ ಗ್ರಾಹಕರ ಖಾತೆಗೆ ಜಮೆಯಾಗುವಂತೆ ಮಾಡಲು ಕಾರ್ಯಪ್ರವೃತ್ತವಾಗಿದ್ದು, ಗ್ರಾಹಕರ ಅನುಕೂಲಕ್ಕಾಗಿ ಸಾಮಾನ್ಯ ಸೇವಾ ಕೇಂದ್ರಗಳನ್ನು ಆರಂಭಿಸುವ ಯೋಜನೆ ಪ್ರಗತಿಯಲ್ಲಿರುವುದಾಗಿ ತಿಳಿಸಿದರು.
ಮಹಿಳಾ ಮೀನುಗಾರರ ಸ್ವಸಹಾಯ ಸಂಘಗಳಿಗೆ ಶೂನ್ಯ ಬಡ್ಡಿದರದಲ್ಲಿ ರೂ. 5 ಲಕ್ಷದವರೆಗೆ ಸಾಲ ಹಾಗೂ ಕೋವಿಡ್ 19 ಸಂದರ್ಭದಲ್ಲಿ ಸಣ್ಣ ಉದ್ದಿಮೆದಾರರಿಗೆ ಹಾಗೂ ಮೀನುಗಾರರಿಗೆ ಆರ್ಥಿಕ ಶಕ್ತಿ ತುಂಬುವ ನಿಟ್ಟಿನಲ್ಲಿ “ಕೋವಿಡ್ ಎಕ್ಸ್ಪ್ರೆಸ್ ಸಾಲ” ಮತ್ತು “ಮಹಾಲಕ್ಷ್ಮೀ ಸ್ವಾವಲಂಬನಾ ಶಕ್ತಿ” ಮೂಲಕ ಸಾಲ ನೀಡಿ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲಾಗಿದ್ದು, ವಿದ್ಯಾರ್ಥಿಗಳಿಗಾಗಿ ಶೂನ್ಯ ಬ್ಯಾಲೆನ್ಸ್ “ಮಹಾಲಕ್ಷ್ಮೀ ವಿದ್ಯಾ ಸಿರಿ” ಉಳಿತಾಯ ಖಾತೆಯ ಸೌಲಭ್ಯ ಒದಗಿಸಲಾಗಿದೆ್ ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿನ ವ್ಯವಹಾರ ಕ್ಷೇತ್ರವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಕುಮಟ, ಹೊನ್ನಾವರ, ಭಟ್ಕಳ ತಾಲೂಕುಗಳಿಗೆ ವಿಸ್ತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯಾದ್ಯಂತ ಬ್ಯಾಂಕಿನ ಕಾರ್ಯಕ್ಷೇತ್ರವನ್ನು ವಿಸ್ತರಿಸುವ ಬಗ್ಗೆ ಆಡಳಿತ ಮಂಡಳಿ ಕಾರ್ಯಪ್ರವೃತ್ತವಾಗಿರುವುದಾಗಿ ಹೇಳಿದರು.
ವರದಿ ವರ್ಷದಲ್ಲಿ ಆದಾಯ ತೆರಿಗೆಗೆ ಹಾಗೂ ನಿಯಮದಂತೆ ಇತರ ಸಲುವಳಿಗಳಿಗೆ ಅನುವು ಮಾಡುವ ಮೊದಲು ರೂ. 5.59 ಕೋಟಿ ಲಾಭ ಗಳಿಸಿದ್ದು, ಹಾಗೂ ಅನುವು ಮಾಡಿದ ನಂತರ ರೂ. 1.75 ಕೋಟಿ ನಿವ್ವಳ ಲಾಭ ಗಳಿಸಿದ್ದು, 2020-21ರ ವರ್ಷಾಂತ್ಯಕ್ಕೆ ಬ್ಯಾಂಕಿನ ಠೇವಣಿಯು ರೂ. 243 ಕೋಟಿಗೆ ಹಾಗೂ ಸಾಲ ಮತ್ತು ಮುಂಗಡವು ರೂ. 177 ಕೋಟಿಗೆ ತಲುಪಿದ್ದು ಬ್ಯಾಂಕಿನ ಒಟ್ಟು ವಹಿವಾಟು ರೂ.4491.57 ಕೋಟಿ, ದುಡಿಯುವ ಬಂಡವಾಳವು ರೂ. 28,112.04 ಲಕ್ಷಕ್ಕೆ ಏರಿಕೆಯಾಗಿದ್ದು ಸಂಪನ್ಮೂಲ ನಿರ್ವಹಣೆಯಲ್ಲಿ ಉತ್ತಮ ಸ್ಥಿತಿಯಲ್ಲಿರುವುದನ್ನು ವಿವರಿಸಲಾಯಿತು.
ಶಾಸನಬದ್ಧ ಲೆಕ್ಕಪರಿಶೋಧಕರು ಬ್ಯಾಂಕನ್ನು ‘ಎ’ ದರ್ಜೆಯಲ್ಲಿ ವರ್ಗೀಕೃತವಾಗಿದ್ದು, ಬ್ಯಾಂಕಿನ ಸದಸ್ಯರಿಗೆ ಶೇ.18 ಡಿವಿಡೆಂಡ್‌ನ್ನು ಸರ್ವಾನುಮತದಿಂದ ಘೋಷಿಸಿದ್ದು, ಇದರಲ್ಲಿ ಶೇ.3ನ್ನು ಸಮಾಜ ಕಲ್ಯಾಣ ನಿಧಿಗೆ ವಿನಿಯೋಗಿಸುವಂತೆ ಸದಸ್ಯರಿಂದ ಬಂದ ಸಲಹೆಯನ್ನು ಸಭೆಯ ಮುಂದಿರಿಸಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಿದವರಿಗೆ ಹಾಗೂ ಮಹಾಸಭೆಯಲ್ಲಿ ವ್ಯಕ್ತವಾದ ಅಭಿವೃದ್ಧಿಪರ ಸಲಹೆ ಸೂಚನೆಗಳಿಗೆ ಕೃತಜ್ಞತೆಯನ್ನು ಸಲ್ಲಿಸಿ, ಮುಂಬರುವ ವರ್ಷಗಳಲ್ಲಿಯೂ ಸಹ ಬ್ಯಾಂಕಿನ ಅಭಿವೃದ್ಧಿಗೆ ಎಲ್ಲರ ಸಹಕಾರವನ್ನು ಅಧ್ಯಕ್ಷರು ಕೋರಿದರು.
ಬ್ಯಾಂಕಿನ ನಿರಂತರ ಸರ್ವಾಂಗೀಣ ಅಭಿವೃದ್ಧಿ ಹಾಗೂ ಬ್ಯಾಂಕಿನ ಸಾಧನೆಯ ಬಗ್ಗೆ ಸದಸ್ಯರು ಸಭೆಯಲ್ಲಿ ಪ್ರಶಂಸೆ ವ್ಯಕ್ತಪಡಿಸಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಜಯ ಸಿ. ಕೋಟ್ಯಾನ್, ಮಲ್ಪೆ ಮೀನುಗಾರರ ಸಂಘದ ನೂತನ ಅಧ್ಯಕ್ಷರಾದ ದಯಾನಂದ ಕೆ. ಸುವರ್ಣ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಪ್ರಥಮ ಎಸ್. ಸಾಲ್ಯಾನ್, ಡಾ| ಸಫಿಯಾನ್ ಇಬ್ರಾಹಿಂ ರವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ನಿರ್ದೇಶಕರಾದ ವೆಂಕಟರಮಣ ಕಿದಿಯೂರು, ವಾಸುದೇವ ಸಾಲ್ಯಾನ್, ಶಶಿಕಾಂತ ಬಿ ಕೋಟ್ಯಾನ್, ಹೇಮನಾಥ ಜೆ ಪುತ್ರನ್, ಶೋಭೇಂದ್ರ ಸಸಿಹಿತ್ಲು, ಕೆ ಸಂಜೀವ ಶ್ರೀಯಾನ್, ರಾಮ ನಾಯ್ಕ್ ಎಚ್, ವಿನಯ ಕರ್ಕೇರ, ನಾರಾಯಣ ಟಿ ಅಮೀನ್, ಸುರೇಶ್ ಬಿ ಕರ್ಕೇರ, ಬಿ ಬಿ ಕಾಂಚನ್, ಶಿವರಾಮ ಕುಂದರ್, ವನಜಾ ಹೆಚ್ ಕಿದಿಯೂರು, ವನಜಾ ಜೆ ಪುತ್ರನ್, ವೃತ್ತಿಪರ ನಿರ್ದೇಶಕರಾದ ಮಂಜುನಾಥ ಎಸ್ ಕೆ, ಬ್ಯಾಂಕಿಂಗ್ ಸಲಹೆಗಾರರಾದ ಆನಂದ ಎನ್ ಪುತ್ರನ್ ಹಾಗೂ ಪ್ರಧಾನ ವ್ಯವಸ್ಥಾಪಕರಾದ ಜಿ ಕೆ ಶೀನಾ ರವರು ಉಪಸ್ಥಿತರಿದ್ದರು.