ಕೋಟ, ಜ.13: ಶೋಷಣೆಯ ವಿರುದ್ಧ ಹಾಗೂ ಜನಪರ ಕಾಳಜಿಗೆ ಹೋರಾಟ ಮೂಲಕ ಉತ್ತರ ಸಿಗುತ್ತದೆ ಇದಕ್ಕೆ ಮೂರ್ತೆದಾರರ ಸಂಘವೇ ನಿದರ್ಶನ ಎಂದು ರಾಜ್ಯದ ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದರು. ಭಾನುವಾರ ಕೋಟದ ಮೂರ್ತೆದಾರರ ಸಹಕಾರಿ ಸಂಘದ ೩೪ನೇ ವರ್ಷಾಚರಣೆ ಹಾಗೂ ಸಂಘದ ಕೇಂದ್ರ ಕಛೇರಿಯ ಕಟ್ಟಡ ಲೋಕಾರ್ಪಣೆ, ದಿ.ಬಂಗಾರಪ್ಪ ಸಭಾಭವನ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯೆಗೆ ಮೊದಲ ಪ್ರಾಶಸ್ತ್ಯವಿದೆ. ಮಕ್ಕಳನ್ನು ವಿದ್ಯೆಯ ಮೂಲಕ ಈ ಸಮಾಜದ ಉನ್ನತ ಹುದ್ದೆಗೇರಲು ಅವಕಾಶ ಕಲ್ಪಿಸಿ ಎಂದರು.
ದ.ಕ ಕೇಂದ್ರ ಸಹಕಾರಿ ಬ್ಯಾಂಕ್ ನ ಮುಖ್ಯಸ್ಥ ಡಾ.ಎಂ ಎನ್ ರಾಜೇಂದ್ರ ಕುಮಾರ್ ಮಾತನಾಡಿ, ಮೂರ್ತೆದಾರರ ಸಂಘ ಜನರ ಸ್ವಾವಲಂಬಿ ಸಂಘವಾಗಿ ರೂಪುಗೊಂಡಿದೆ. ಸಹಕಾರ ಕ್ಷೇತ್ರದಲ್ಲಿ ಮೂರ್ತೆದಾರರ ಕೊಡುಗೆಯನ್ನು ಸ್ಮರಿಸಿದ ಅವರು, ಅವಿಭಜಿತ ಜಿಲ್ಲೆಗಳಲ್ಲಿ ವಾಣಿಜ್ಯ ಬ್ಯಾಂಕುಗಳ ಪಾರುಪತ್ಯದ ನಡುವೆ ಸಹಕಾರ ಕ್ಷೇತ್ರ ತಲೆ ಎತ್ತಿ ಕಾರ್ಯನಿರ್ವಹಿಸಿ ಜನಸ್ನೇಹಿಯಾಗಿದೆ. ಇದೇ ವೇಳೆ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕನ್ನಡ ಭಾಷಿಕರಿಲ್ಲದೆ ಭಣಗುಟ್ಟುತ್ತಿದೆ ಇದರಿಂದ ಜನಸಾಮಾನ್ಯರಿಗೆ ಸಂಕಷ್ಟವನ್ನು ತಂದೊಡ್ಡಿದೆ ಎಂದರು.
ಸಹಕಾರ ಸಚಿವ ಕೆ.ಎನ್ ರಾಜಣ್ಣ, ದ.ಕ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ ಎನ್ ರಾಜೇಂದ್ರ ಕುಮಾರ್, ಮೂರ್ತೆದಾರರ ಸಂಘದ ಅಧ್ಯಕ್ಷ ಕೊರಗ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕೆಮ್ಮಣ್ಣು, ಬೆಂಗಳೂರಿನ ಗಣಪತಿ, ಕೋಟ ಮೂರ್ತೆದಾರರ ಸಂಘದ ಉಪಾಧ್ಯಕ್ಷ ಜಯರಾಮ್ ಪೂಜಾರಿ, ನಿರ್ದೇಶಕರುಗಳಾದ ಕೃಷ್ಣ ಪೂಜಾರಿ, ರಾಜು ಪೂಜಾರಿ, ಜಿ.ಸಂಜೀವ ಪೂಜಾರಿ, ಕೃಷ್ಣ ಪೂಜಾರಿ ಪಿ., ಮಂಜುನಾಥ ಪೂಜಾರಿ, ಭಾರತಿ, ಪ್ರಭಾವತಿ, ಶಾಖಾ ಸಲಹಾ ಸಮಿತಿಯ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕೋಟ ಮೂರ್ತೆದಾರರ ಸಂಘದ ಅಧ್ಯಕ್ಷ ಕೆ.ಕೊರಗ ಪೂಜಾರಿ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೋಟ ಅಮೃತೇಶ್ವರಿ ದೇಗುಲದಿಂದ ಹೊರಟ ವೈಭವದ ಮೆರವಣಿಗೆಗೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಅಧ್ಯಕ್ಷ ಡಾ.ಕೆ ಎಸ್ ಕಾರಂತ್ ಹಾಗೂ ಕೋಟ ಅಮೃತೇಶ್ವರಿ ದೇಗುಲದ ಅಧ್ಯಕ್ಷ ಅನಂದ್ ಸಿ ಕುಂದರ್ ಚಾಲನೆ ನೀಡಿದರು. ಕೋಟ ದೇಗುಲದಿಂದ ಹೊರಟ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಘದ ಕಛೇರಿ ತಲುಪಿ ನಂತರ ಸಭೆ ನಡೆಯುವ ಕೋಟದ ಶಾಂಭವೀ ಶಾಲಾ ಮೈದಾನ ತಲುಪಿತು. ಮೆರವಣಿಗೆಯಲ್ಲಿ ಕೀಲುಕುದುರೆ, ಚಂಡೆ, ವಾದ್ಯ, ಕಳಶ ಹಿಡಿದ ಸಂಘದ ಸದಸ್ಯರು ಇತ್ಯಾದಿ ಗಮನ ಸೆಳೆಯಿತು.
ಕೇಂದ್ರ ಕಛೇರಿಯ ಸ್ಚಂತ ಕಟ್ಟಡವನ್ನು ಹಾಗೂ ದಿ.ಎಸ್ ಬಂಗಾರಪ್ಪ ಸ್ಮರಣಾರ್ಧ ಸಭಾಭವನವನ್ನು ಸಹಕಾರ ಸಚಿವ ಕೆ.ಎನ್ ರಾಜಣ್ಣ, ಕೇಂದ್ರ ಕಛೇರಿಯನ್ನು ದ.ಕ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್, ಶಾಖಾ ಕಛೇರಿಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಗ್ರಾಹಕರ ಭದ್ರತಾ ಕೋಶವನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ವಾಣಿಜ್ಯ ಸಂಕೀರ್ಣವನ್ನು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, ನಗದು ಪತ್ರವನ್ನು ಜಿಲ್ಲಾ ಸಹಕಾರಿ ಯೂನಿಯನ್ ಬ್ಯಾಂಕ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಉದ್ಘಾಟಿಸಿದರು. ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ ಆಡಳಿತ ಮಂಡಳಿಯ ಸಭಾಂಗಣ, ಭದ್ರತಾ ಕೊಠಡಿಯನ್ನು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜಗದೀಶ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಕೋಟ ಅಮೃತೇಶ್ವರಿ ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್, ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ, ದ.ಕ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ಮಂಗಳೂರು ಅಧ್ಯಕ್ಷ ಸಂಜೀವ ಪೂಜಾರಿ, ಜಿಲ್ಲಾ ಮೂರ್ತೆದಾರರ ಸಹಕಾರಿ ಮಂಡಲದ ಬ್ರಹ್ಮಾವರದ ಅಧ್ಯಕ್ಷ ಸತೀಶ್ ಉಪ್ಪೂರು, ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಂಬಧಕಿ ಸುಕನ್ಯಾ, ಉಡುಪಿ ಸಹಕಾರ ಸಂಘಗಳ ಉಪನಿಬಂಧಕಿ ಕೆ.ಆರ್. ಲಾವಣ್ಯ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಕೋಟ ಅಧ್ಯಕ್ಷ ಸದಾನಂದ ಪೂಜಾರಿ, ಕೋಟಿ ಚೆನ್ನಯ್ಯ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಿದ್ಧಿ ಶ್ರೀನಿವಾಸ ಪೂಜಾರಿ, ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಸ್ವ ಸಹಾಯ ವಿವಿದ್ದೋಧೇಶ ಸಂಘದ ಅಧ್ಯಕ್ಷೆ ಸುಧಾ ಎ ಪೂಜಾರಿ, ಕುಂದಾಪುರ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ, ಉದ್ಯಮಿ ಇಬ್ರಾಹಿಂ ಸಾಹೇಬ್ ಕೋಟ, ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ, ಉಡುಪಿ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲದ ಬ್ರಹ್ಮಾವರದ ಮಾಜಿ ಅಧ್ಯಕ್ಷ ಪಿ.ಕೆ ಸದಾನಂದ, ಕೋಟ ಮೂರ್ತೆದಾರರ ಸಂಘದ ಉಪಾಧ್ಯಕ್ಷರು, ನಿರ್ದೇಶಕರು ಉಪಸ್ಥಿತರಿದ್ದರು. ಶಿಕ್ಷಕರಾದ ನರೇಂದ್ರ ಕುಮಾರ್ ಕೋಟ, ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕೆಮ್ಮಣ್ಣು ಸ್ವಾಗತಿಸಿ, ನಿರ್ದೇಶಕ ಕೃಷ್ಣ ಪೂಜಾರಿ ಪಿ ವಂದಿಸಿದರು. ಸಂಘದ ಸಿಬ್ಬಂದಿ ದಿನೇಶ್ ಪೂಜಾರಿ ಸಹಕರಿಸಿದರು.