Friday, November 15, 2024
Friday, November 15, 2024

ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಸ್ವಾಗತಾರ್ಹ ವಾತಾವರಣ ಕಲ್ಪಿಸಿ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ

ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಸ್ವಾಗತಾರ್ಹ ವಾತಾವರಣ ಕಲ್ಪಿಸಿ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ

Date:

ಉಡುಪಿ, ನ.15: ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆ ಹಾಗೂ ಅನುಕೂಲತೆಗಳನ್ನು ಹೆಚ್ಚಿಸುವ ಮೂಲಕ ಸ್ವಾಗತಾರ್ಹ ವಾತಾವರಣವನ್ನು ಕಲ್ಪಿಸಿ, ಮತ್ತಷ್ಟು ಪ್ರವಾಸೋದ್ಯಮ ಚಟುವಟಿಕೆಗಳನ್ನು ಜಿಲ್ಲೆಯಲ್ಲಿ ಹೆಚ್ಚಿಸಬೇಕು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿಯವರು ತಿಳಿಸಿದರು. ಅವರು ಶುಕ್ರವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಗೆ ಕಳೆದ ಸಾಲಿನಲ್ಲಿ 4 ಕೋಟಿ ರೂ. ಗೂ ಹೆಚ್ಚು ಪ್ರವಾಸಿಗರು ಬಂದು ಹೋಗಿದ್ದಾರೆ. ಈ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಹೊರಗಿನಿಂದ ಬರುವ ಪ್ರವಾಸಿಗರಿಗೆ ಅನುಕೂಲವಾಗುವ ಎಲ್ಲಾ ರೀತಿಯ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರ ಜೊತೆಗೆ ಪ್ರವಾಸಿ ತಾಣಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು. ಕುಂದಾಪುರ ತಾಲೂಕಿನ ಪ್ರವಾಸಿ ತಾಣಗಳಲ್ಲಿ ಒಂದಾದ ಕೋಡಿ ಕಡಲ ತೀರದ ಸರ್ವೇ ನಂಬರ್ 310 ರಲ್ಲಿ 26.50 ಎಕರೆ ಜಾಗವನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಬೇಕು. ಈ ಜಾಗವು ಪ್ರವಾಸೋದ್ಯಮಕ್ಕೆ ಪೂರಕವಾಗಿದ್ದು, ಡಾಲ್ಫಿನ್‌ಗಳು ಕಂಡುಬರುವ ಉಡುಪಿಯ ಏಕೈಕ ಪ್ರವಾಸಿ ತಾಣವಾಗಿದೆ. ಇಲ್ಲಿ ಪ್ರವಾಸಿ ಚಟುವಟಿಕೆಗಳನ್ನು ಆಧುನಿಕ ಶೈಲಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದು ತಿಳಿಸಿದರು. ಕಡಲ ತೀರಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು, ಜಲಕ್ರೀಡೆ, ಬೋಟಿಂಗ್ ಸೇರಿದಂತೆ ಮತ್ತಿತರ ಚಟುವಟಿಕೆಗಳನ್ನು ಕೈಗೊಳ್ಳುವಾಗ ಪ್ರವಾಸಿಗರ ಸುರಕ್ಷತೆಗೆ ಪ್ರಥಮ ಆದ್ಯತೆ ಒದಗಿಸಬೇಕು. ಈ ಚಟುವಟಿಕೆಗಳನ್ನು ಪ್ರಾರಂಭಿಸುವ ಮುನ್ನ ಸೂಕ್ತ ಪ್ರಾಧಿಕಾರಗಳ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದರು. ತ್ರಾಸಿಯಿಂದ ಮರವಂತೆ ಬೀಚ್ ರಸ್ತೆಯುದ್ದಕ್ಕೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ರಸ್ತೆ ಬದಿಯ ಸೈಡ್ ಗೈಡ್ ರೈಲ್ ಅನ್ನು ಹಾಗೂ ಬ್ಯಾರಿಕೇಡ್‌ಗಳನ್ನು ನಿರ್ಮಿಸಬೇಕು. ರಸ್ತೆ ಹೋಕರು ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ, ಬೀಚ್‌ನ ಆಕರ್ಷಣೆಗೆ ಒಳಗಾಗಿ ಹೋಗುತ್ತಾರೆ. ಇದರಿಂದಾಗಿ ಅಪಘಾತಗಳು ಆಗುವ ಸಾಧ್ಯತೆಗಳಿವೆ. ಇವುಗಳಿಗೆ ಕಡಿವಾಣ ಹಾಕಬೇಕಿದೆ ಎಂದರು.

ಪಡುಕರೆ ಬೀಚ್ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಚಟುವಟಿಕೆ ಉತ್ತೇಜಿಸಲು ಕೆಲವೊಂದು ಹೋಂ ಸ್ಟೇಗಳಿಗೆ ಅನುಮತಿಗಳನ್ನು ನೀಡಲಾಗಿದೆ. ಇವುಗಳ ಬಗ್ಗೆ ಸ್ಥಳೀಯ ಸಂಘ-ಸಂಸ್ಥೆಗಳು ಆಕ್ಷೇಪಣೆಗಳನ್ನು ಸಹ ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ, ಕಾನೂನು ಬಾಹಿರ ಯಾವುದೇ ರೀತಿಯ ಚಟುವಟಿಕೆಗಳು ಆಗದಂತೆ ಎಚ್ಚರ ವಹಿಸುವುದು ಸೂಕ್ತವಾಗಿದೆ ಎಂದರು. ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಕಳೆದ 20 ವರ್ಷಗಳ ಹಿಂದೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯು
ಮಲ್ಪೆ ಬೀಚ್ ಹಾಗೂ ಸೈಂಟ್ ಮೇರೀಸ್ ದ್ವೀಪದ ನಿರ್ವಹಣೆಯನ್ನು ಮಲ್ಪೆ ಅಭಿವೃದ್ಧಿ ಸಮಿತಿಗೆ ನೀಡಲಾಗಿತ್ತು. ಆದರೆ ಪ್ರಸ್ತುತ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿಗೆ ಹಾಗೂ ಸಮಿತಿಯ ಕಾರ್ಯ ವ್ಯಾಪ್ತಿಗೆ ಅಡೆತಡೆಯಾಗುತ್ತಿರುವುದು ಹಾಗೂ ಕಾನೂನು ಬಾಹೀರ ತೊಂದರೆಯಾಗುತ್ತಿರುವ ಹಿನ್ನೆಲೆ, ಇವುಗಳ ನಿರ್ವಹಣೆಯ ಅಧಿಕಾರವನ್ನು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಗೆ ಹಿಂಪಡೆಯಲಾಗಿದೆ ಎಂದರು. ಮಲ್ಪೆಯ ಕಡಲ ತೀರದಲ್ಲಿ ಫ್ಲೋಟಿಂಗ್ ಬ್ರಿಡ್ಜ್ ಚಟುವಟಿಕೆಯನ್ನು ಖಾಸಗಿಯವರು ನಿರ್ವಹಿಸುತ್ತಿದ್ದು, ಇದರ ಆದಾಯದಲ್ಲಿ ಶೇ. 75:25 ಅಡಿಯಲ್ಲಿ ನಿರ್ವಹಣೆಯನ್ನು ಬೀಚ್ ಅಭಿವೃದ್ಧಿ ಸಮಿತಿಯೇ ನಿರ್ವಹಿಸಬೇಕು ಎಂದ ಅವರು, ಮಲ್ಪೆ ಬೀಚ್‌ನಲ್ಲಿ ಜಿಪ್‌ಲೈನ್ ಚಟುವಟಿಕೆ ನಡೆಸಲು ಕೆಲವರು ಮುಂದೆ ಬಂದಿದ್ದು, ಅವರುಗಳು ಸೂಕ್ತ ಪ್ರಾಧಿಕಾರದ ಪರವಾನಿಗೆ ಮತ್ತು ಎನ್.ಓ.ಸಿ ಪಡೆದು ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಿ ನಡೆಸುವುದು ಸೂಕ್ತ ಎಂದರು.

ಮಲ್ಪೆ-ಪಡುಕೆರೆ ಬ್ರಿಡ್ಜ್ನ ಸ್ಟಾರ್ಟಿಂಗ್ ಪಾಯಿಂಟ್‌ನ ಹತ್ತಿರ ಬೋಟ್ ಮೇಲೆ ಎಳೆಯುವ ಜಾಗದಿಂದ ಪ್ರವಾಸಿಗರನ್ನು ಬೆಳಗ್ಗಿನಿಂದ ಸಂಜೆಯವರೆಗೆ ಸಮುದ್ರ ಹಾಗೂ ನದಿಯಲ್ಲಿ ವಿಹಾರ ನಡೆಸಿಕೊಂಡು ಬರುವಂತೆ ಬೋಟ್ ನಡೆಸಲು ಖಾಸಗಿಯವರು ಮುಂದೆ ಬಂದಿರುತ್ತಾರೆ. ಈ ಸಂಬಂಧ ಸಾಧಕ-ಬಾಧಕಗಳನ್ನು ಪರಿಶೀಲಿಸಿ, ನಿಯಮಾನುಸಾರ ಅನುಮತಿ ನೀಡಬೇಕು ಎಂದು ಸಲಹೆ ನೀಡಿದರು. ಕೇಂದ್ರ ಸರ್ಕಾರದ ಸ್ವದೇಶ ದರ್ಶನ ಅಡಿಯಲ್ಲಿ ಚಾಲೆಂಜ್ ಬೇಸಡ್ ಡೆಸ್ಟಿನೇಷನ್ ಡೆವಲಪ್‌ಮೆಂಟ್ ಆಧಾರದಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ಇಕೋ ಟೂರಿಸಂ ಮತ್ತು ಅಮೃತ್ ಧರೋಹರ್ ಸೈಟ್ಸ್ಗಳನ್ನು 10.00 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಈ ಬಗ್ಗೆ ಪಡುಕೆರೆಯಿಂದ ಕಾಪುವರೆಗೆ ಸೈಕಲ್ ಟ್ರ್ಯಾಕ್ ಗಳನ್ನೊಳಗೊಂಡಂತೆ ವಿವಿಧ ಸೌಲಭ್ಯಗಳನ್ನು ಒಳಗೊಂಡ ಈಗಾಗಲೇ ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದರು. ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ಸ್ಪೆಷಲ್ ಅಸಿಸ್ಟೆನ್ಸ್ ಟು ಸ್ಟೇಟ್ ಫಾರ್ ಕ್ಯಾಪಿಟಲ್ ಇನ್‌ವೆಸ್ಟ್ಮೆಂಟ್ ಯೋಜನೆಯಡಿ ಜಿಲ್ಲೆಯ ಬೈಂದೂರು ತಾಲೂಕು ಪಡುವರಿ ಗ್ರಾಮದ ಸೋಮೇಶ್ವರ ಬೀಚ್ ಅಭಿವೃದ್ಧಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದರು.

ಸಭೆಯಲ್ಲಿ ಶಾಸಕರುಗಳಾದ ಯಶ್‌ಪಾಲ್ ಎ ಸುವರ್ಣ, ಎ ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸಿ.ಯು., ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಾರ್ವಜನಿಕ ಅಹವಾಲು ಮತ್ತು ಲೋಕಾಯುಕ್ತ ಜನ ಸಂಪರ್ಕ ಸಭೆ

ಉಡುಪಿ, ನ.15: ಉಡುಪಿ ಲೋಕಾಯುಕ್ತ ವಿಭಾಗದ ವತಿಯಿಂದ ಜಿಲ್ಲಾ ಲೋಕಾಯುಕ್ತ ವಿಭಾಗದ...

ಆರೋಗ್ಯವಂತ ಹವ್ಯಾಸಗಳನ್ನು ರೂಢಿಸಿಕೊಳ್ಳಿ: ಡಾ. ಪಿ.ವಿ. ಭಂಡಾರಿ

ಬ್ರಹ್ಮಾವರ, ನ.15: ಬಾರ್ಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರ್ಕಾರಿ...

ನವಜಾತ ಶಿಶುವಿನ ಆರೈಕೆಗೆ ತಾಯಂದಿರು ಹೆಚ್ಚಿನ ಆದ್ಯತೆ ನೀಡಿ: ಜಿಲ್ಲಾಧಿಕಾರಿ

ಉಡುಪಿ, ನ.15: ನವಜಾತ ಶಿಶುವಿನ ಅವಧಿಯು ಮಕ್ಕಳ ಜೀವನದಲ್ಲಿ ಅತ್ಯಂತ ನಿರ್ಣಾಯಕ...

ಉಡುಪಿ ಜಿಲ್ಲೆಯ ವಿವಿಧೆಡೆ ಮಳೆಯ ಅಬ್ಬರ

ಉಡುಪಿ, ನ.15: ಉಡುಪಿ ಜಿಲ್ಲೆಯ ವಿವಿಧೆಡೆ ಗುರುವಾರ ಮಧ್ಯಾಹ್ನದಿಂದ ಸಂಜೆಯವರೆಗೆ ಬಿಟ್ಟು...
error: Content is protected !!