ಉಡುಪಿ, ನ.15: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರಿನಲ್ಲಿ ಐಕ್ಯೂಎಸಿ ಆಶ್ರಯದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಿಂದ ನವೆಂಬರ್ 14 ರಿಂದ 20ರ ವರೆಗೆ ನಡೆಯುವ ಗ್ರಂಥಾಲಯ ಸಪ್ತಾಹದ ಉದ್ಘಾಟನೆ ಕಾರ್ಯಕ್ರಮ ಜರಗಿತು. ಉದ್ಘಾಟನೆಗೈದ ತೆಂಕನಿಡಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಶ್ವನಾಥ ಕರಬ, ಪುಸ್ತಕ ಪ್ರೀತಿ ಜ್ಞಾನದ ಕಣ್ಣು ತೆರಿಸಿ ಜೀವನ ಮಾರ್ಗವನ್ನು ಬದಲಾಯಿಸಬಲ್ಲುದು. ಜಗತ್ತನ್ನೇ ಒಬ್ಬ ಸೂರ್ಯ ಬೆಳಗಿದರೆ ಒಂದು ಪುಸ್ತಕ ನಮ್ಮ ಬದುಕನ್ನು ಬೆಳಗಿಸಬಹುದು. ಅಂಬೇಡ್ಕರ್ ಮಾರ್ಕ್ ನಂತಹ ಮಹಾನ್ ಮಾನವತಾವಾದಿಗಳು ಮಹಾನ್ ಪುಸ್ತಕ ಪ್ರೇಮಿಗಳಾಗಿದ್ದು ಇಡೀ ಜಗತ್ತನ್ನೇ ಬದಲಾಯಿಸುವ ಚಿಂತನೆಗಳನ್ನು ನಮಗೆ ನೀಡಿದ್ದರು. ಯುವ ಜನತೆಯಲ್ಲಿ ಪುಸ್ತಕ ಓದುವ ಹವ್ಯಾಸ ಅವರಲ್ಲಿ ಮುಕ್ತ ಆಲೋಚನೆಗಳನ್ನು ಹುಟ್ಟುಹಾಕಿ ಆತ್ಮಬಲವನ್ನು ಹೆಚ್ಚಿಸುತ್ತದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ನಿತ್ಯಾನಂದ ವಿ. ಗಾಂವಕರ, ಇಂದಿನ ಯುವಜನತೆ ಗ್ರಂಥಾಲಯ ಬಳಕೆಯನ್ನು ಹೆಚ್ಚಾಗಿ ಮಾಡದಿರುವುದೇ ಕೆಲವೊಂದು ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ಗ್ರಂಥಾಲಯದ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ವೃತ್ತಿ ಭವಿಷ್ಯ ರೂಪಿಸಿಕೊಳ್ಳುವಂತೆ ಸೂಚಿಸಿದರು. ಸ್ನಾತಕೋತ್ತರ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರಘು ನಾಯ್ಕ, ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ, ಕಾರ್ಯಕ್ರಮ ಸಂಯೋಜಕ ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ, ಗ್ರಂಥಾಲಯ ಸಹಾಯಕಿ ಪ್ರಮೀಳಾ, ಬೋಧಕ/ಬೋಧಕೇತರ ವೃಂದದವರು, ಸ್ನಾತಕೋತ್ತರ ಮತ್ತು ಪದವಿ ವಿದ್ಯಾರ್ಥಿಗಳು ಭಾಗಿಯಾದರು. ಗ್ರಂಥಾಲಯ ಸಪ್ತಾಹದ ಅಂಗವಾಗಿ ರಸಪ್ರಶ್ನೆ, ಪುಸ್ತಕ ಪ್ರದರ್ಶನ, ಪದಬಂಧ, ಪ್ರಬಂಧ ಸ್ಪರ್ಧೆ ಇತ್ಯಾದಿಗಳನ್ನು ಏರ್ಪಡಿಸಲಾಗಿದೆ. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರಶಾಂತ ಎನ್. ಕಾರ್ಯಕ್ರಮ ನಿರೂಪಿಸಿದರು.