ಉಡುಪಿ: ಕೌಶಲ್ಯಾಭಿವೃದ್ಧಿ ತರಬೇತಿಗಳಿಗೆ ಪ್ರಸಿದ್ದಿ ಪಡೆದಿರುವ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಪಾಲುದಾರ ಸಂಸ್ಥೆಯಾದ ಉನ್ನತಿ ಕ್ಯಾರಿಯರ್ ಅಕಾಡೆಮಿಯಲ್ಲಿ “ಕೌಶಲ್ಯ ವೃದ್ಧಿಯಿಂದ ಆತ್ಮವಿಶ್ವಾಸ ನಿರ್ಮಾಣ” ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಅತಿಥಿಗಳಾಗಿ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಭಾಸ್ಕರ್ ಶೆಟ್ಟಿಯವರು ಭಾಗವಹಿಸಿ, ಇಂದಿನ ಜಾಗತಿಕ ಸ್ಪರ್ಧೆಯ ಯುಗದಲ್ಲಿ ಕೇವಲ ಪಠ್ಯವನ್ನಷ್ಟೇ ಓದಿದರೆ ಸಾಲದು, ಪಠ್ಯದೊಂದಿಗೆ ವಿದ್ಯಾರ್ಥಿಗಳು ಸಂವಹನ ಕಲೆ, ವಿವಿಧ ಕ್ಷೇತ್ರಗಳಿಗೆ ಬೇಕಾಗಿರುವ ಪರಿಣಿತಿಯನ್ನು ಕೂಡ ಪಡೆಯುವುದು ಅತ್ಯಗತ್ಯ. ಇಂತಹ ತರಬೇತಿಗಳನ್ನು ಉನ್ನತಿ ಸಂಸ್ಥೆಯವರು ಹಮ್ಮಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ ಮತ್ತು ಸಮಯೋಚಿತ. ವಿದ್ಯಾರ್ಥಿಗಳೆಲ್ಲರೂ ಇಂತಹ ತರಬೇತಿಗಳ ಮೂಲಕ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿ, ದೇಶದ ಭವಿಷ್ಯ ನಿರ್ಮಾಣ ಯುವಶಕ್ತಿಯ ಸದ್ಭಳಕೆಯಿಂದ ಮಾತ್ರ ಸಾಧ್ಯವಾಗಿಸಬಹುದು. ಆದುದರಿಂದ ನಮ್ಮ ಸಂಸ್ಥೆಯು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದರು.
ನಿರ್ದೇಶಕಿ ಪೌರ್ಣಮಿ ಪ್ರೇಮ್ ಶೆಟ್ಟಿ, ತರಬೇತುದಾರ ನವೀನ್ ನಾಯಕ್, ಸುಪ್ರೀತ, ಲ್ಯಾಕ್ಸಿನ್, ಐನೀಶ್, ಯೋಗಿತ, ರಾಜೇಶ್ ಉಪಸ್ಥಿತರಿದ್ದರು.