ಉಡುಪಿ: ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ಜೆ.ಸಿ.ಬಿ.ಯಿಂದ ಮರಗಳನ್ನು ಕೆಡವಿ, ಆವರಣ ಗೋಡೆಯನ್ನು ಹಾನಿಗೊಳಿಸಿ, ಅವಾಚ್ಯ ಪದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿದ ಆರೋಪಿಗಳಿಗೆ ನಗರದ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
2014 ಫೆಬ್ರವರಿ 13 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಆರೋಪಿಗಳಾದ ಉಡುಪಿಯ ಬಡನಿಡಿಯೂರು ಗ್ರಾಮದ ಅರುಣ್ ಸನಿಲ್, ಆಲ್ವಿನ್ ವಾಝ್, ತೆಂಕನಿಡಿಯೂರು ಗ್ರಾಮದ ಜೋಯ್ ಹೌಸ್ ನಿವಾಸಿ ಪ್ರೀಯಾ ರೋಡ್ರಿಗಸ್, ತೆಂಕನಿಡಿಯೂರು ಗ್ರಾಮದ ತೊಟ್ಟಂನ ಗ್ರೇಸಿ ಡಿಸೋಜಾ ಮತ್ತು ಮಲ್ಪೆಯ ಕೊಡವೂರು ಗ್ರಾಮದ ವಿಶ್ವನಾಥ ತಿಂಗಳಾಯ ಇವರುಗಳು, ಉಡುಪಿ ತಾಲೂಕು ತೆಂಕನಿಡಿಯೂರು ಗ್ರಾಮದ ರೇಖಾ ಪೈ ಇವರ ಪಟ್ಟಾ ಸ್ಥಳದಲ್ಲಿ, ಹೊಸದಾಗಿ ತಮ್ಮ ಅನುಕೂಲಕ್ಕೆ ರಸ್ತೆ ನಿರ್ಮಾಣ ಮಾಡುವ ಉದ್ದೇಶದಿಂದ ರೇಖಾ ಪೈ ಇವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ಜಾಗದಲ್ಲಿ ಬೆಳೆದು ನಿಂತಿದ್ದ ಮರಗಳನ್ನು ಜೆ.ಸಿ.ಬಿ ಯಿಂದ ಬೀಳಿಸಿ, ಆವರಣ ಗೋಡೆಯನ್ನು ಹಾನಿಗೊಳಿಸಿದಾಗ ಇದಕ್ಕೆ ಆಕ್ಷೇಪಿಸಿದ ರೇಖಾ ಪೈ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿರುವ ಹಿನ್ನೆಲೆ, ಮಲ್ಪೆ ಠಾಣೆಯ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ರವರು ಮೇಲ್ಕಂಡ ಆರೋಪಿಗಳಿಗೆ 2 ವರ್ಷದ ಕಾರಾಗೃಹ ವಾಸ ಶಿಕ್ಷೆ ಹಾಗೂ 10000 ರೂ. ದಂಡ ವಿಧಿಸಿ, ತೀರ್ಪು ನೀಡಿರುತ್ತಾರೆ. ಸರಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮೋಹಿನಿ ಕೆ ವಾದ ಮಂಡಿಸಿರುತ್ತಾರೆ.