ಉಡುಪಿ: ಇತಿಹಾಸ ಪ್ರಸಿದ್ಧ ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಎ. 10ರ ತನಕ ನಡೆಯುವ ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮದ ಅಂಗವಾಗಿ ಇಂದು ಜೋಡುಕಟ್ಟೆಯಿಂದ ಭವ್ಯ ಮೆರವಣಿಗೆ ಮೂಲಕ ಅಮ್ಮನ ಸನ್ನಿಧಾನಕ್ಕೆ ಹಸಿರು ಹೊರೆಕಾಣಿಕೆ ಸಮರ್ಪಿಸಲಾಯಿತು. ಶ್ರೀ ಕ್ಷೇತ್ರದ ಆಡಳಿತಾಧಿಕಾರಿ ಡಾ. ರೋಶನ್ ಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು. ಊರ ಪರವೂರ ಭಕ್ತರು ವಾಹನಗಳಲ್ಲಿ ಅಕ್ಕಿ, ಬೇಳೆ ಕಾಳು, ಸಕ್ಕರೆ, ಬೆಲ್ಲ, ತುಪ್ಪ, ತೆಂಗಿನಕಾಯಿ ಅರ್ಪಿಸಿದರು. ಕ್ಷೇತ್ರದಲ್ಲಿ ಪ್ರತಿ ದಿನ ಧಾರ್ಮಿಕ ಕಾರ್ಯಕ್ರಮ, ಹಾಲು ಪಾಯಸ ಸಹಿತ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಕಾಳಿಂಗಮರ್ಧನ ಕೃಷ್ಣ, ಈಶ್ವರ, ಹನುಮಂತ, ಅಯ್ಯಪ್ಪ, ಋಷಿ, ಸಿಂಹವಾಹಿನಿ ದೇವಿ, ರುಂಡ ಮಾಲಿನಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಮಹಿಳಾ ತಂಡದ ಚಂಡೆ ವಾದನ, ಚಕ್ರ ತಾಳ ಹಿಡಿದ ಬಾಲಕಿಯರ ಕುಣಿತ, ಸಾಂಪ್ರದಾಯಿಕ ಡೋಲು ವಾದನ ಮೆರವಣಿಗೆಯ ಮೆರುಗು ಹೆಚ್ಚಿಸಿತು.
ದೇವಳದ ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಕೆ. ಕೃಷ್ಣಮೂರ್ತಿ ಆಚಾರ್ಯ, ನಗರಸಭೆ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಸರದಿ ಅರ್ಚಕ ಗುರುರಾಜ ಉಪಾಧ್ಯಾಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್. ಮುರಳೀಧರ ಬಲ್ಲಾಳ್, ಪ್ರಧಾನ ಕಾರ್ಯದರ್ಶಿ ಸಂಜೀವ ಎ., ನಾರಾಯಣ ರಾವ್, ಉಪಾಧ್ಯಕ್ಷ ನವೀನ್ ಶೆಟ್ಟಿ, ನಿರುಪಮಾ ಶೆಟ್ಟಿ, ಶ್ರೀಶ ತಂತ್ರಿ, ಜಯದುರ್ಗಾಪರಮೇಶ್ವರಿ ಯುವಕ ಮಂಡಳಿಯ ಉಮಾನಾಥ ಶೇರಿಗಾರ್ ಉಪಸ್ಥಿತರಿದ್ದರು.