ಉಡುಪಿ, ಅ.25: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಕಟ್ಟಡಗಳ ಭಗ್ನ ಅವಶೇಷಗಳನ್ನು ಎಲ್ಲೆಂದರಲ್ಲಿ ಹಾಕುತ್ತಿರುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು, ಇದು ಪುರಸಭೆಗಳ ಅಧಿನಿಯಮದಂತೆ ದಂಡಕ್ಕೆ ಅರ್ಹವಾದ ಕೃತ್ಯವಾಗಿರುತ್ತದೆ. ಆದರಿಂದ ಕಟ್ಟಡಗಳ ಭಗ್ನ ಅವಶೇಷಗಳನ್ನು ಎಲ್ಲೆಂದರಲ್ಲಿ ಎಸೆಯದೆ/ ಹಾಕದೇ ತಾತ್ಕಾಲಿಕವಾಗಿ ಉಡುಪಿ ನಗರಸಭೆಯ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ನಿಗಧಿಪಡಿಸಲಾದ ಒಂದು ಎಕರೆ ಜಾಗದಲ್ಲಿ, ನಿಗದಿತ ಶುಲ್ಕ ಪಾವತಿಸಿ ವಾಹನವನ್ನು ಅಗತ್ಯವಿದ್ದಲ್ಲಿ ಪಡೆಯಬಹುದು ಅಥವಾ ಉಡುಪಿ ನಗರಸಭೆಯಲ್ಲಿ ನೋಂದಾಯಿಸಿ ತಮ್ಮ ಸ್ವಂತ ವೆಚ್ಚದಲ್ಲಿ ಖಾಸಗಿ ವಾಹನವನ್ನು ಉಪಯೋಗಿಸಿಕೊಂಡು ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡಬಹುದಾಗಿದೆ.
ಸದರಿ ಆದೇಶವನ್ನು ಉಲ್ಲಂಘಿಸಿ ಉಡುಪಿ ನಗರಸಭೆ ವ್ಯಾಪ್ತಿಯ ಸಾರ್ವಜನಿಕ ಸ್ಥಳ ಅಥವಾ ರಸ್ತೆಗಳಲ್ಲಿ ಕಟ್ಟಡಗಳ ಭಗ್ನ ಅವಶೇಷಗಳನ್ನು ಹಾಕಿದಲ್ಲಿ 10,000 ರೂ. ವರೆಗೆ ದಂಡ ವಿಧಿಸುವುದರೊಂದಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಉಡುಪಿ ನಗರಸಭೆಯ ಆರೋಗ್ಯ ಶಾಖೆಯನ್ನು ಸಂಪರ್ಕಿಸುವಂತೆ ಮತ್ತು ಉಡುಪಿ ನಗರವನ್ನು ಸ್ವಚ್ಛವಾಗಿಡಲು ಹಾಗೂ ಸ್ವಚ್ಚ ಭಾರತ್ ಮಿಷನ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಸಾರ್ವಜನಿಕರು ನಗರಸಭೆಯೊಂದಿಗೆ ಸಂಪೂರ್ಣ ಸಹಕಾರ ನೀಡುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.