ಉಡುಪಿ: ಮಹಿಳಾ ಸಮಾನತೆಯ ಕುರಿತಾದ ಅರಿವು ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬುತ್ತದೆ. ಪುರುಷ ಕೇಂದ್ರಿತ ಯೋಚನಾ ಕ್ರಮವಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಇದು ಅತಿ ಅಗತ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಯುಜಿಸಿ ಪ್ರಾಯೋಜಿತ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ. ಅನಿತಾ ರವಿಶಂಕರ್ ಹೇಳಿದರು.
ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿ ನಡೆದ ಒಂದು ದಿನದ ಮಹಿಳಾ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಗಣನಾಥ ಎಕ್ಕಾರು ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಖ್ಯಾತ ಚಿಂತಕಿ ವಾಣಿ ಅವರು ಮಹಿಳೆಯ ಹಕ್ಕು ಹಾಗೂ ಮಹಿಳಾಪರ ಕಾನೂನುಗಳ ಕುರಿತಾಗಿ ಮಹಿಳೆ ಮತ್ತು ಪುರುಷರಿಬ್ಬರು ಅರಿತುಕೊಳ್ಳುವುದು ಬಹುಮುಖ್ಯ. ಈ ಅರಿವು ಮಹಿಳೆಗೆ ಸಂವಿಧಾನ ಕೊಡಮಾಡಿದ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಪಡೆಯಲು ಸಹಕಾರಿ ಎಂದರು.
ಐ.ಕ್ಯೂ.ಎ.ಸಿ. ಸಂಚಾಲಕ ಡಾ. ಸುರೇಶ್ ರೈ ಕೆ., ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ರಾಘವ ನಾಯ್ಕ, ಸಮಾಜಕಾರ್ಯ ವಿಭಾಗ ಸಹಾಯಕ ಪ್ರಾಧ್ಯಾಪಕಿ ಸುಷ್ಮಾ ಟಿ. ಉಪಸ್ಥಿತರಿದ್ದರು.
ಕಾಲೇಜಿನ ಮಹಿಳಾ ಸಬಲೀಕರಣ ಘಟಕದ ಸಂಚಾಲಕಿ ಡಾ. ಸುನೀತಾ ವಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅನುಷಾ ಮತ್ತು ತಂಡದವರು ಪ್ರಾರ್ಥಿಸಿದರು. ದರ್ಶಿನಿ ವಂದಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಶರ್ಮಿಳಾ ಹಾರಾಡಿ ನಿರೂಪಿಸಿದರು.