ಉಡುಪಿ, ಅ.17: ಮತ್ಸ್ಯಗಂಧ ರೈಲಿಗೆ ಅತ್ಯಾಧುನಿಕ ತಂತ್ರಜ್ಞಾನದ ಎಲ್‌ಹೆಚ್‌ಬಿ ಭೋಗಿಗಳು ಉತ್ಪಾದನೆಗೊಳ್ಳುತ್ತಿವೆ. ಈ ನಡುವೆ ಹೊಸ ಆದೇಶ ಹೊರಡಿಸಿರುವ ಇಲಾಖೆಯು ಫೆಬ್ರವರಿ 15 ಅಂದರೆ ಮುಂದಿನ 120 ದಿನಗಳ ಕಾಲ ಪ್ರಯಾಣಿಕರು ರೈಲ್ವೆ ಬುಕಿಂಗ್ ಮಾಡಿರುವುದರಿಂದ ಫೆಬ್ರವರಿ 15ರವರೆಗೆ ಈಗ ಇರುವ ಭೋಗಿಗಳಲ್ಲೇ ಮತ್ಸ್ಯಗಂಧ ರೈಲು ಪ್ರಯಾಣಿಸಲಿದೆ. ಫೆಬ್ರವರಿ 15 ರಿಂದ ಹೊಸ ಬೋಗಿಗಳನ್ನು ಅಳವಡಿಸುವ ಮೂಲಕ ಅತ್ಯಾಧುನಿಕ ಎಲ್‌ಹೆಚ್‌ಬಿ ಕೋಚ್ ಗಳನ್ನು ಒಳಗೊಂಡಿರುವ ರೈಲು ಕರಾವಳಿ ಮತ್ತು ಮುಂಬೈಯನ್ನು ಬೆಸೆಯಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡವು ಸೇರಿದಂತೆ ಕರ್ನಾಟಕದ ಕರಾವಳಿ ಮತ್ತು ಮಹಾರಾಷ್ಟ್ರವನ್ನು ಬೆಸೆಯುವ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲನ್ನು ಅದೆಷ್ಟೋ ವರ್ಷಗಳಿಂದ ಕರ್ನಾಟಕ ಕರಾವಳಿಗಳು ಮುಂಬೈಗೆ ತೆರಳಲು ಈ ರೈಲನ್ನು ಅವಲಂಬಿಸಿದ್ದಾರೆ. ಆದರೆ ಈ ರೈಲಿಗೆ ಬಹಳಷ್ಟು ವರ್ಷವಾಗಿದ್ದ ಕಾರಣ ಒಂದಷ್ಟು ಶಿಥಿಲಾವಸ್ಥೆಗೆ ತಲುಪಿತ್ತು.
ಜುಲೈ ತಿಂಗಳಲ್ಲಿ ಕೇಂದ್ರ ರೈಲ್ವೆ ಸಚಿವರನ್ನು ಮತ್ತು ಕೇಂದ್ರ ಸಚಿವ ವಿ.ಸೋಮಣ್ಣ ಅವರನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿಯಾಗಿ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲಿಗೆ ಹೊಸ ಕೋಚನ್ನು ಅಂದರೆ ಅತ್ಯಾಧುನಿಕ ಎಲ್‌ಹೆಚ್‌ಬಿ ಕೋಚ್ ಅನ್ನು ಅಳವಡಿಸಿ ಮೇಲ್ದರ್ಜೆಗೇರಿಸಬೇಕೆಂದು ಮನವಿ ಮಾಡಿದ್ದರು. ರೈಲ್ವೆ ಪ್ರಯಾಣಿಕರು, ರೈಲ್ವೆ ಹಿತ ರಕ್ಷಣಾ ಸಮಿತಿಯವರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಮಂದಿ ರೈಲು ಅವ್ಯವಸ್ಥೆಯ ಬಗ್ಗೆ ಗಮನಕ್ಕೆ ತಂದಿದ್ದರು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಮನವಿಗೆ ಸ್ಪಂದಿಸಿದ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ವಿ ಸೋಮಣ್ಣರವರಿಗೆ ಧನ್ಯವಾದಗಳು ತಿಳಿಸುತ್ತೇನೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಂತಸ ವ್ಯಕ್ತಪಡಿಸಿದ್ದಾರೆ.
ಏನಿದು ಎಲ್‌ಹೆಚ್‌ಬಿ ಕೋಚ್?: ಎಲ್‌ಹೆಚ್‌ಬಿ ಕೋಚ್ ಅತ್ಯಾಧುನಿಕ ತಂತ್ರಜ್ಞಾನದ ಕೋಚ್ ಆಗಿದ್ದು ಯಾವುದೇ ಅಪಘಾತ ಸಂಭವಿಸಿದರೂ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ತಡೆಯುವ ತಂತ್ರಜ್ಞಾನ ಈ ಕೋಚ್‌ನಲ್ಲಿದೆ.