ಮಣಿಪಾಲ, ಅ.17: ಮಣಿಪಾಲದ ಆರ್‌ಎಸ್‌ಬಿ ಭವನದಲ್ಲಿ ಮಹಿಳೆಯರ ಆರೋಗ್ಯ ತಪಾಸಣಾ ಶಿಬಿರ (ಅಧಿಕ ರಕ್ತದೊತ್ತಡ, ಮಧುಮೇಹ, ರಕ್ತಹೀನತೆ ತಪಾಸಣೆ ಮತ್ತು ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಕುರಿತು ಜಾಗೃತಿ)ವನ್ನು ಮಣಿಪಾಲ, ಸೆಂಟರ್ ಫಾರ್ ಕಮ್ಯುನಿಟಿ ಆಂಕೊಲಾಜಿ, ಸಮುದಾಯ ವೈದ್ಯಕೀಯ ವಿಭಾಗ, ಕಸ್ತೂರ್ಬಾ ಮೆಡಿಕಲ್ ಕಾಲೇಜು (ಕೆಎಂಸಿ), ಮಾಹೆ, ಮಣಿಪಾಲ ಹಾಗೂ ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ, ಮಣಿಪಾಲ, ರಾಜಾಪುರ ಸಾರಸ್ವತ ಬ್ರಾಹ್ಮಣ ವೇದಿಕೆ, ಸಹಯೋಗದೊಂದಿಗೆ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಆರ್‌ಎಸ್‌ಬಿ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ನಾಯಕ್, ಮಣಿಪಾಲದ ಆರ್‌ಎಸ್‌ಬಿ ಮಹಿಳಾ ವೇದಿಕೆ ಅಧ್ಯಕ್ಷೆ ರೂಪಾ ನಾಯಕ್, ಕೆಎಂಸಿ ಮಾಹೆ, ಮಣಿಪಾಲದ ಸಮುದಾಯ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅಖಿಲಾ ಡಿ., ಮಹಿಳಾ ವೇದಿಕೆಯ ಸದಸ್ಯೆ ಹಾಗೂ ಶಿಬಿರದ ಸಂಯೋಜಕಿ ಸರೋಜಿನಿ ಪ್ರಭು ಕೋಡಿಬೆಟ್ಟು ಅವರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಮಣಿಪಾಲದ ಆರ್‌ಎಸ್‌ಬಿ ಮಹಿಳಾ ವೇದಿಕೆಯ ಕಾರ್ಯದರ್ಶಿ ಚಂದ್ರಿಕಾ ವಂದಿಸಿದರು.
ಸಮುದಾಯ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಅಖಿಲಾ ಡಿ, ಅವರು ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಜಾಗೃತಿ ಕುರಿತು ಮಾಹಿತಿ ನೀಡಿದರು. ಅವರು ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ರೋಗಲಕ್ಷಣಗಳನ್ನು ವಿವರಿಸಿದರು, ಆರಂಭಿಕ ಪತ್ತೆಗಾಗಿ ನಿಯಮಿತ ತಪಾಸಣೆಯ ಪ್ರಾಮುಖ್ಯತೆ; ವಿಶೇಷವಾಗಿ ಸ್ತನ ಸ್ವಯಂ ಪರೀಕ್ಷೆ ಮತ್ತು ಪ್ಯಾಪ್ ಸ್ಮೀಯರ್ ಪರೀಕ್ಷೆಯ ಬಗ್ಗೆ ತಿಳಿಸಿದರು, ಆರಂಭಿಕ ಪತ್ತೆಯಾದರೆ ಕ್ಯಾನ್ಸರ್ ಅನ್ನು ಗುಣಪಡಿಸಬಹುದೆಂದು ತಿಳಿಸಿದರು. ಸೆಂಟರ್ ಫಾರ್ ಕಮ್ಯುನಿಟಿ ಆಂಕೊಲಾಜಿ, ಸಮುದಾಯ ವೈದ್ಯಕೀಯ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ ಇದರ ಸಂಯೋಜಕರಾದ ಡಾ.ರಂಜಿತಾ ಎಸ್.ಶೆಟ್ಟಿ ಅವರು ಉಡುಪಿ ಜಿಲ್ಲೆಯಾದ್ಯಂತ ಆಯೋಜಿಸುತ್ತಿರುವ ಸ್ತನ, ಗರ್ಭಕಂಠ ಮತ್ತು ಬಾಯಿ ಕ್ಯಾನ್ಸರ್ ತಪಾಸಣಾ ಚಟುವಟಿಕೆಗಳ ಮಾಹಿತಿಯನ್ನು ನೀಡಲಾಯಿತು. ಈ ಶಿಬಿರದ ಫಲಾನುಭವಿಗಳು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಹೆಚ್ಚಿನ ತಪಾಸಣೆಗಳನ್ನು ಅಗತ್ಯವಿದ್ದಲ್ಲಿ ಪಡೆಯಬಹುದು. ಶಿಬಿರದಲ್ಲಿ ಒಟ್ಟು 50 ಫಲಾನುಭವಿಗಳಿಗೆ ಅಧಿಕ ರಕ್ತದೊತ್ತಡ, ಮಧುಮೇಹ, ರಕ್ತಹೀನತೆ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಮಾಡಲಾಯಿತು.