ಉಡುಪಿ: ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಕಾರದಲ್ಲಿ ಮಾರ್ಚ್ 27 ರಂದು 3:30 ಕ್ಕೆ ಉಡುಪಿಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ‘ಮಲಬಾರ್ ವಿಶ್ವರಂಗ ಪುರಸ್ಕಾರ 2022’ ಪ್ರದಾನ ಮಾಡಲಾಗುವುದು.
ರಾಜ್ಯ ಮತ್ತು ಹೊರರಾಜ್ಯದ ಐವರು ಹಿರಿಯ ರಂಗಕರ್ಮಿಗಳಾದ ಕುಂದಾಪುರದ ಡಾ. ಪಾರ್ವತಿ ಜಿ. ಐತಾಳ (ನಾಟಕಕಾರರು ಹಾಗೂ ವಿಮರ್ಶಕರು), ಮುಂಬೈಯ ಡಾ. ಭರತ್ ಕುಮಾರ್ ಪೊಲಿಪು (ನಟ ಹಾಗೂ ನಿರ್ದೇಶಕರು ಹೊರ ರಾಜ್ಯ), ಉಡುಪಿಯ ಬಿ. ಪ್ರಭಾಕರ್ ಭಂಡಾರಿ (ಸಂಘಟಕರು ತುಳು ರಂಗಭೂಮಿ) ಮಂಗಳೂರಿನ ಅರೆಹೊಳೆ ಸದಾಶಿವ ರಾವ್ (ಸಂಘಟಕರು ಕನ್ನಡ ರಂಗಭೂಮಿ), ಹಾವೇರಿಯ ಶಂಕರ ಶಿವಪ್ಪ ತುಮ್ಮಣ್ಣನವರ (ನಟ) ಇವರಿಗೆ ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ ‘ಮಲಬಾರ್ ವಿಶ್ವರಂಗ ಪುರಸ್ಕಾರ’ ಪ್ರಧಾನ ಮಾಡಲಾಗುವುದು.
ಸಮಾರಂಭದ ಸಭಾಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಬಡಗುಬೆಟ್ಟು ಕೋ-ಆಪರೇಟಿವ್ ಸೊಸೈಟಿಯ ಮಹಾಪ್ರಬಂಧಕ ಜಯಕರ ಶೆಟ್ಟಿ ಇಂದ್ರಾಳಿ, ಮಣಿಪಾಲ ಮಾಹೆಯ ಯೋಗ ವಿಭಾಗದ ಮುಖ್ಯಸ್ಥೆ ಡಾ. ಅನ್ನಪೂರ್ಣ ಮತ್ತಿತರರು ಉಪಸ್ಥಿತರಿರುವರು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.