ಉಡುಪಿ, ಸೆ.12: ಕಾರ್ಮಿಕ ಇಲಾಖೆಯ ವತಿಯಿಂದ 23 ಅಸಂಘಟಿತ ವರ್ಗಗಳಾದ ಹಮಾಲರು, ಮನೆಗೆಲಸದವರು, ಚಿಂದಿ ಆಯುವವರು, ಟೈಲರ್‌ಗಳು, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಭಟ್ಟಿ ಕಾರ್ಮಿಕರು, ಗಿಗ್ ವೃತ್ತಿ ನಿರ್ವಹಿಸುತ್ತಿರುವ ಡೆಲಿವರಿ ಕಾರ್ಮಿಕರು, ದಿನಪತ್ರಿಕೆ ವಿತರಿಸುವ ಕಾರ್ಮಿಕರು, ಸಿನಿ ಕಾರ್ಮಿಕರು, ನೇಕಾರರು, ಬೀದಿಬದಿ ವ್ಯಾಪಾರಿಗಳು, ಹೋಟೇಲ್ ಕಾರ್ಮಿಕರು, ಪೋಟೋಗ್ರಾಫರ್‌ಗಳು, ಸ್ವತಂತ್ರ ಲೇಖನ ಬರಹಗಾರರು, ಕಲ್ಯಾಣ ಮಂಟಪ/ಸಭಾ ಭವನ/ಟೆಂಟ್/ಪೆಂಡಲ್‌ಗಳ ಕೆಲಸ ನಿರ್ವಹಿಸುವ ಎಲ್ಲಾ ಕಾರ್ಮಿಕರು, ಬೀಡಿ ಕಾರ್ಮಿಕರು ಮತ್ತು ಅಸಂಘಟಿತ ವಿಕಲಚೇತನ ಕಾರ್ಮಿಕರು, ಅಲೆಮಾರಿ ಪಂಗಡದ ಅಸಂಘಟಿತ ಕಾರ್ಮಿಕರು ಮತ್ತು ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರನ್ನು (ಮೆಕಾನಿಕ್ ಸೇರಿದಂತೆ) ನೊಂದಾಯಿಸಲು ಹಾಗೂ ಸೌಲಭ್ಯ ವಿತರಿಸುವ ಸಲುವಾಗಿ ವರ್ಗವಾರು ಮಾಹಿತಿಯು ಅತ್ಯವಶ್ಯಕವಾಗಿರುತ್ತದೆ.
ಆದ್ದರಿಂದ, ವಿವಿಧ ಅಸಂಘಟಿತ ಕಾರ್ಮಿಕ ಸಂಘಟನೆಗಳಲ್ಲಿ ನೊಂದಣಿಯಾದ ಕಾರ್ಮಿಕರ ದತ್ತಾಂಶವನ್ನು ಸಂಗ್ರಹಿಸಬೇಕಾಗಿರುತ್ತದೆ. ಅಲ್ಲದೇ, ಕಾರ್ಮಿಕ ಸಂಘಟನೆಗಳಲ್ಲಿ ನೊಂದಾಯಿಸದೇ ಇರುವ ಇತರೆ ಕಾರ್ಮಿಕರನ್ನೂ ಸಹ ಹೊಸದಾಗಿ ಅಭಿವೃದ್ದಿಪಡಿಸಿದ ತಂತ್ರಾಂಶದಲ್ಲಿ ನೊಂದಾಯಿಸಿ ಸ್ಮಾರ್ಟ್ಕಾರ್ಡ್ ನೀಡಲು ಉದ್ದೇಶಿಸಲಾಗಿರುವುದರಿಂದ, ಜಿಲ್ಲೆಯಲ್ಲಿ ಮೇಲ್ಕಂಡ ಅಸಂಘಟಿತ ಕಾರ್ಮಿಕ ವರ್ಗಗಳ ಸಂಘ/ಸಂಸ್ಥೆಗಳಲ್ಲಿ ನೊಂದಣಿಯಾದ ಕಾರ್ಮಿಕರ ಮಾಹಿತಿಯನ್ನು ಹಾಗೂ ಸಂಘ/ಸಂಸ್ಥೆಗಳಲ್ಲಿ ನೊಂದಣಿಯಾಗದ ಮೇಲ್ಕಂಡ ಅಸಂಘಟಿತ ಕಾರ್ಮಿಕ ವರ್ಗಗಳ ಅರ್ಹ ಕಾರ್ಮಿಕರಿದ್ದಲ್ಲಿ, ಕಾರ್ಮಿಕ ಅಧಿಕಾರಿಗಳ ಕಛೇರಿ, ಉಡುಪಿ ಉಪ ವಿಭಾಗ, ಎ ಬ್ಲಾಕ್, ಮೊದಲನೇ ಮಹಡಿ, ಕೊಠಡಿ ಸಂಖ್ಯೆ:201, ರಜತಾದ್ರಿ, ಮಣಿಪಾಲ, ಉಡುಪಿ ಅಥವಾ ಆಯಾ ತಾಲೂಕಿನ ಕಾರ್ಮಿಕ ನಿರೀಕ್ಷಕರ ಕಛೇರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ಉಪ ವಿಭಾಗದ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.