ಉಡುಪಿ, ಸೆ.5: ಪ್ರಾಥಮಿಕ ಶಾಲೆಯ ಶಿಕ್ಷಕರುಗಳು ನಮ್ಮ ಮನಃಪಟಲದಲ್ಲಿ ಸದಾ ಕಾಲ ನೆಲೆಸಿರುತ್ತಾರೆ. ಶಿಕ್ಷಕರುಗಳು ವಿದ್ಯಾರ್ಥಿಗಳ ಪಾಲಿಗೆ ಮಾದರಿ ವ್ಯಕ್ತಿತ್ವಗಳಾಗಬೇಕು ಆಗ ಮಾತ್ರ ಅವರನ್ನು ತಿದ್ದಿ ತೀಡಲು ಸಾಧ್ಯವಾಗುವುದು. ಪ್ರತೀ ವಿದ್ಯಾರ್ಥಿಯಲ್ಲೂ ಅಪರಿಮಿತ ಶಕ್ತಿ ಅಡಗಿರುತ್ತದೆ ಅದನ್ನು ಗುರುತಿಸುವ ಶ್ರೇಷ್ಠ ಕಾರ್ಯ ಶಿಕ್ಷಕರದ್ದು. ಸಾಮಾನ್ಯ ಕೆಲಸಗಾರರಿಗಿರುವ ಧೈರ್ಯ ನಮ್ಮ ವಿದ್ಯಾರ್ಥಿಗಳಿಗೂ ಬರಬೇಕು. ಆಗ ಮಾತ್ರ ಅವರ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ನಿವೃತ್ತರಾಗಿರುವ ರವಿಶಂಕರ್ ರಾವ್ ಕುಂದಾರು ಹೇಳಿದರು. ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ನಿವೃತ್ತ ಶಿಕ್ಷಕರುಗಳನ್ನು ಸನ್ಮಾನಿಸಿ ಮಾತನಾಡಿದರು.
ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಮತ್ತು ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವತಿಯಿಂದ ಭಾಸ್ಕರ್ ಡಿ ಸುವರ್ಣ ನಿವೃತ್ತ ಮುಖ್ಯೋಪಾಧ್ಯಾಯರು ನಿಟ್ಟೂರು ಪ್ರೌಢಶಾಲೆ ಉಡುಪಿ, ದಯಾವತಿ ನಿವೃತ್ತ ಮುಖ್ಯ ಶಿಕ್ಷಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀಜೂರು, ಐರಿನ್ ಮೆನೆಜಸ್ ನಿವೃತ್ತ ಮುಖ್ಯ ಶಿಕ್ಷಕಿ ಎಲ್.ವಿ.ಪಿ. ಹಿರಿಯ ಪ್ರಾಥಮಿಕ ಶಾಲೆ ಪುತ್ತೂರು ಉಡುಪಿ, ರಾಮಕೃಷ್ಣ ಪ್ರಭು ನಿವೃತ್ತ ಮುಖ್ಯೋಪಾಧ್ಯಾಯರು ಶ್ರೀ ವಿಷ್ಣುಮೂರ್ತಿ ಪ್ರೌಢ ಶಾಲೆ ಕುದಿ, ವಾಸು ಪ್ರಭು ನಿವೃತ್ತ ಮುಖ್ಯೋಪಾಧ್ಯಾಯರು ಪರ್ಕಳ ಪ್ರೌಢಶಾಲೆ ಇವರನ್ನು ಗೌರವಿಸಲಾಯಿತು.
ಚೆಸ್‌ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ನಿಖಿಲ್ ವಿಕ್ರಮ್ ಕೆ ಎಸ್ ಮತ್ತು ಮಿಥಾಲಿ ಶೆಟ್ಟಿ ಹಾಗೂ ಟೇಬಲ್ ಟೆನ್ನಿಸ್‌ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ವತ್ ವಿ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಮಣಿಪಾಲ ಜ್ಞಾನಸುಧಾ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು. ಉಡುಪಿ ಜ್ಞಾನಸುಧಾ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಪ್ರಾಂಶುಪಾಲರಾದ ಪ್ರಕಾಶ್ ಜೋಗಿ ವಂದಿಸಿ, ಉಪನ್ಯಾಸಕಿ ಪವಿತ್ರ ಕಾರ್ಯಕ್ರಮ ನಿರೂಪಿಸಿದರು.