ಕಾರ್ಕಳ, ಸೆ.1: ಕಾರ್ಕಳ ಪರಿಸರದಲ್ಲಿ ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ರಾಷ್ಟ್ರೀಯ ಸೇವಾ ಯೋಜನೆ ಪ್ರಾಂತೀಯ ಕೇಂದ್ರ ಬೆಂಗಳೂರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ರಾಷ್ಟ್ರೀಯ ಸೇವಾ ಯೋಜನೆ ಕೋಶ ಬೆಂಗಳೂರು, ರಾಷ್ಟ್ರೀಯ ಸೇವಾ ಯೋಜನಾ ಘಟಕ ಕ್ರಿಯೇಟಿವ್ ಪದವಿಪೂರ್ವ ಕಾಲೇಜು, ಕಾರ್ಕಳ ಇದರ ಸಂಯುಕ್ತಾಶ್ರಯದಲ್ಲಿ ಒಂದು ದಿನದ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ನಡೆಯಿತು. ಶಾಸಕ ಸುನಿಲ್ ಕುಮಾರ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಡಾ. ಬಿ ಗಣನಾಥ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಡುವುದು ನಮ್ಮೆಲ್ಲರ ಕರ್ತವ್ಯ. ಪ್ರಕೃತಿಯನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿಕೊಡಬೇಕಾದರೆ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು. ಇದು ನಾವು ಅವರಿಗೆ ನೀಡುವ ಉತ್ತಮ ಉಡುಗೊರೆಯಾಗಿದೆ. ಮಕ್ಕಳು ಬೆಳಗಿದರೆ ಸಮಾಜ ಬೆಳಗುತ್ತದೆ ಎಂದರು.
ಹಿರ್ಗಾನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎ ಮತ್ತು ಬಿ ಘಟಕದ ಅಧ್ಯಕ್ಷರುಗಳಾದ ಸತೀಶ್ ಪೂಜಾರಿ ಹಾಗೂ ಸುಭಾಷ್, ಸಂಸ್ಥೆಯ ಸಂಸ್ಥಾಪಕರಲ್ಲಿ ಓರ್ವರಾದ ಆದರ್ಶ ಎಂ ಕೆ., ಪ್ರಾಂಶುಪಾಲ ವಿದ್ವಾನ್ ಗಣಪತಿ ಭಟ್, ರಾಷ್ಟ್ರೀಯ ಸೇವಾ ಯೋಜನಾ ಸಂಯೋಜನಾಧಿಕಾರಿಗಳು, ಅರ್ಥಶಾಸ್ತ್ರ ಉಪನ್ಯಾಸಕ ಉಮೇಶ್, ಬೋಧಕ ಮತ್ತು ಬೋಧಕೇತರ ವೃಂದದವರು, ವಾಣಿಜ್ಯ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಜೀವಶಾಸ್ತ್ರ ಉಪನ್ಯಾಸಕ ಲೋಹಿತ್ ಎಸ್ ಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಜೋಡುರಸ್ತೆಯಿಂದ ಹಿರ್ಗಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಜೂರುವರೆಗೆ, ಮಾವಿನಕಟ್ಟೆಯಿಂದ ಕಾನಂಗಿ ವೆಂಕಟೇಶ್ವರ ದೇವಸ್ಥಾನದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು.