ಕಟಪಾಡಿ, ಆ.15: ಪೇಜಾವರ ಮಠದ ಆಡಳಿತ್ತಕ್ಕೊಳಪಟ್ಟ ಪಾಜಕ ಆನಂದತೀರ್ಥ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ 78ನೇ ಸ್ವಾತಂತ್ರೋತ್ಸವ ಕಾರ್ಯಕ್ರಮವನ್ನು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ಸ್ವಾಮೀಜಿ ಉದ್ಘಾಟಿಸಿದರು. ನಂತರ ಆಶೀರ್ವಚನ ನೀಡಿದ ಶ್ರೀಗಳು, ಆಂಗ್ಲರಿಂದ ಸ್ವತಂತ್ರಗೊಂಡು ಇಂದಿಗೆ ನಾವು 78 ವರ್ಷ ಕಳೆದಿದ್ದೇವೆ. ಆದರೆ ನಾವು ಸೇವಿಸುವ ಆಹಾರದಲ್ಲಿ ಇಂದಿಗೂ ವಿದೇಶಿ ವ್ಯಾಮೋಹ ಕಡಿಮೆಯಾಗಿಲ್ಲ. ಈಗಿನ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಎಲ್ಲರಲ್ಲೂ ವಿದೇಶಿ ಆಹಾರ, ವಿದೇಶಿ ವ್ಯಾಮೋಹ ಹಾಗೇ ಜೀವಂತವಾಗಿದೆ. ನಮ್ಮ ಮಕ್ಕಳು ಶಾಲಾ, ಕಾಲೇಜು ಶಿಕ್ಷಕರು ಹೇಳಿ ಕೊಡುವ ಆಹಾರ ಪದ್ಧತಿ ಹಾಗೂ ಮನೆಯಲ್ಲಿ ತಾಯಿ ನೀಡುವ ಕೈತುತ್ತಿನಿಂದ ಬೆಳೆಯಬೇಕೇ ವಿನಃ ಮಾದಕ ವಸ್ತು, ನಮ್ಮದಲ್ಲದ ಜಂಕ್ ಫುಡ್ ತಿಂದು ಬೆಳೆಯಬಾರದು. ಈ ತರಹದ ಆಹಾರ ಪದ್ಧತಿಯಿಂದ ನಾವು ಸಂಪೂರ್ಣ ಸ್ವಾತಂತ್ರ ಪಡೆದು, ಭಾರತೀಯ ಆಹಾರ ಪದ್ಧತಿ ನಮ್ಮದಾಗಬೇಕು ಎಂದರು.
ಆಡಳಿತ ಮಂಡಳಿ ಕಾರ್ಯಧ್ಯಕ್ಷ ನಾಗರಾಜ್ ಬಲ್ಲಾಳ್, ಖಜಾಂಚಿ ಲಕ್ಷ್ಮೀನಾರಾಯಣ ಉಪಾಧ್ಯ, ಸದಸ್ಯ ಸುದರ್ಶನ್ ರಾವ್, ಕಾಲೇಜು ಪ್ರಾಂಶುಪಾಲ ವಿಜಯ್ ಪಿ. ರಾವ್, ಶಾಲಾ ಪ್ರಾಂಶುಪಾಲೆ ಡಾ. ಗೀತಾ ಶಶಿಧರ್, ಕಾಲೇಜು ಉಪಪ್ರಾಂಶುಪಾಲೆ ಕಮಲಾಕ್ಷಿ ಪ್ರಕಾಶ್, ಶಾಲಾ ಸಂಯೋಜಕಿ ವಿಜೇತಾ ನಾಗರಾಜ್ ಉಪಸ್ಥಿತರಿದ್ದರು. ಶಾಲೆಯ ಎನ್.ಸಿ.ಸಿ, ಹಾಗೂ ಕಬ್ಸ್ ಬುಲ್ ಬುಲ್, ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಶಿಕ್ಷಕಿಯರಾದ ವಿಜೇತಾ ನಾಗರಾಜ್ ಸ್ವಾಗತಿಸಿ, ಕಮಲಾಕ್ಷಿ ಪ್ರಕಾಶ್ ವಂದಿಸಿದರು. ವಿನುತಾ ರಾವ್ ಕಾರ್ಯಕ್ರಮ ನಿರೂಪಿಸಿದರು.