ಉಡುಪಿ, ಆ.14: ಮೀನುಗಾರಿಕೆ ಇಲಾಖೆಯ ವತಿಯಿಂದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮ ಬುಧವಾರ ಮಲ್ಪೆ ಮೀನುಗಾರರ ಸಂಘದ ಸಭಾಂಗಣದಲ್ಲಿ ಜರುಗಿತು. ಮಲ್ಪೆ ಫಿಶರೀಸ್ ಒಕ್ಕೂಟದ ಅಧ್ಯಕ್ಷ ದಯಾನಂದ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಸ್ರೋ ಭಾರತ ದೇಶದ ಹೆಮ್ಮೆಯ ಸಂಸ್ಥೆಯಾಗಿದೆ. ಮೀನುಗಾರರ ಭದ್ರತೆಯ ಉದ್ದೇಶದಿಂದ ಸಮುದ್ರದಲ್ಲಿ ಮೀನುಗಾರರಿಗೆ ತೊಂದರೆ ಉಂಟಾದಾಗ ಸ್ಯಾಟಲೈಟ್ ಮೂಲಕ ಅಪಾಯಕ್ಕೊಳಗಾದ ಮೀನುಗಾರರೊಂದಿಗೆ ಸಂಪರ್ಕ ಹೊಂದಿ, ಅಗತ್ಯ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ ಎಂದ ಅವರು ಮುಂದಿನ ದಿನಗಳಲ್ಲಿ ಮೀನುಗಾರರ ಸಂರಕ್ಷಣೆಯ ನಿಟ್ಟಿನಲ್ಲಿ ಇಲಾಖೆಯು ಇನ್ನೂ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು ಎಂದರು.
ಸಿ.ಐ.ಸಿ.ಇ.ಎಫ್ ನ ಉಪನಿರ್ದೇಶಕ ಎನ್. ಕೆ. ಪಾತ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಕಾರವು ಪ್ರತಿ ವರ್ಷ ಆಗಸ್ಟ್ 23ನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲಾಗುತ್ತಿದೆ. ಭಾರತವು ಚಂದ್ರಯಾನವನ್ನು ನಡೆಸಿದ ನಾಲ್ಕನೇ ದೇಶವಾಗಿದ್ದು, ಭಾರತ ದೇಶ ಬಾಹ್ಯಾಕಾಶದಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದೆ. ಇದರಿಂದಾಗಿ ಸಮಾಜಕ್ಕೆ ಹಲವು ಪ್ರಯೋಜನಗಳು ಸಹ ಆಗಿವೆ ಎಂದರು.
ಇಸ್ರೋದ ವಿಜ್ಞಾನಿ ನಕುಲ್ ಪಾಥಕ್ ಮೀನುಗಾರರೊಂದಿಗೆ ವರ್ಚುವಲ್ ಮೂಲಕ ಸಂವಾದ ನಡೆಸಿದರು. ಶ್ರೀಕಾಂತ್, ಸಂಘ ಸಂಸ್ಥೆಯ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಯು. ಮಹೇಶ್ ಕುಮಾರ್ ಸ್ವಾಗತಿಸಿ, ಮಲ್ಪೆ ಮೀನುಗಾರಿಕಾ ಬಂದರಿನ ಉಪನಿರ್ದೇಶಕಿ ಸರಿತಾ ಖಾದ್ರಿ ನಿರೂಪಿಸಿ, ಸಿ.ಐ.ಸಿ.ಇ.ಎಫ್ ನ ಸಹಾಯಕ ನಿರ್ದೇಶಕಿ ದಿವ್ಯ ಶರ್ಮ ವಂದಿಸಿದರು.