ಉಡುಪಿ, ಆ.14: ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಮಳೆ ಕಡಿಮೆಯಾಗಿರುವ ಹಿನ್ನೆಲೆ, ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಭೀತಿ ಹರಡುವ ಸಂಭವ ಹೆಚ್ಚಾಗಿರುತ್ತದೆ. ಸಾರ್ವಜನಿಕರು ಜ್ವರ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ಕೂಡಲೇ ಸಮೀಪದ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಚಿಕಿತ್ಸೆ ಪಡೆಯಬೇಕು. ಕುಡಿಯಲು ಕಾಯಿಸಿ ಆರಿಸಿದ ನೀರನ್ನೇ ಉಪಯೊಗಿಸಬೇಕು. ಉಡುಪಿ ನಗರಸಭಾ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು, ಗೂಡಂಗಡಿ ಮಾಲೀಕರು ತಮ್ಮಲ್ಲಿರುವ ಎಳನೀರು ಬೊಂಡವನ್ನು ಅಂದೇ ವಿಲೇವಾರಿ ಮಾಡುವುದು ಹಾಗೂ ಚರಂಡಿಗೆ ಕಸ ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇತರೆ ಯಾವುದೇ ರೀತಿಯ ತ್ಯಾಜ್ಯಗಳನ್ನು ಎಸೆಯದಂತೆ ಸೂಚನೆ ನೀಡಲಾಗಿರುತ್ತದೆ.
ನಗರಸಭೆಯು ತನ್ನ ವ್ಯಾಪ್ತಿಯಲ್ಲಿ ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ನಿರಂತರ ಶ್ರಮಿಸುತ್ತಿದ್ದು, ಸರ್ವೆ ನಡೆಸಿ ಜಾಗೃತಿ ಮೂಡಿಸುವ ಜೊತೆಗೆ ಅಂಗಡಿಯ ಸುತ್ತಮುತ್ತಲು ಇರುವ ಕಸ ತ್ಯಾಜ್ಯಗಳನ್ನು ಸಂಗ್ರಹಿಸಿ ನಗರಸಭೆಗೆ ವಿಲೇ ಮಾಡಲು ಸೂಚಿಸಲಾಗುತ್ತಿದೆ. ಇದರ ಹೊರತಾಗಿಯೂ ಯಾವುದೇ ಉದ್ದಿಮೆ, ಹೋಟೆಲ್, ಫಾಸ್ಟ್ಫುಡ್ ಸ್ಟಾಲ್, ಗೂಡಂಗಡಿಗಳಲ್ಲಿ ಈ ಬಗ್ಗೆ ಕ್ರಮ ವಹಿಸದೇ ಇದ್ದಲ್ಲಿ ನೋಟಿಸ್ ನೀಡಿ 5000 ರೂ. ದಂಡ ವಿಧಿಸಲಾಗುವುದರೊಂದಿಗೆ ಅಂತಹ ಉದ್ದಿಮೆಗಳ ಉದ್ದಿಮೆ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.