ಕೋಟ, ಜೂ.28: ಯಕ್ಷಗಾನ ಕರಾವಳಿ ಭಾಗದ ಸಾಂಸ್ಕೃತಿಕ ರಾಯಭಾರಿ ಮಾತ್ರವಲ್ಲದೇ ಇಲ್ಲಿನ ಜನರ ನಾಡಿಮಿಡಿತವಾಗಿದೆ. ಕನ್ನಡ ಭಾಷೆಯ ಗಟ್ಟಿತನ ಯಕ್ಷಗಾನದಲ್ಲಿ ನಾವು ನೋಡಬಹುದು. ತಾಳಮದ್ದಳೆಗಳು ಪ್ರೇಕ್ಷಕ ವರ್ಗಕ್ಕೆ ಜ್ಞಾನ ಭಂಡಾರ ನೀಡುವುದಲ್ಲದೇ ಬದುಕಿಗೆ ಬೇಕಾದ ಮಹತ್ವ ಸಾರುವಲ್ಲಿ ಪಾತ್ರ ವಹಿಸುತ್ತದೆ. ಏಕವ್ಯಕ್ತಿ ತಾಳಮದ್ದಳೆ ಸಪ್ತಾಹ ಕಾರ್ಯಕ್ರಮ ಆಯೋಜನಯ ಮೂಲಕ ಹೊಸ ಹವ್ಯಾಸಿ ಕಲಾವಿದರ ಸೃಷ್ಠಿಗೆ ದಾರಿದೀಪವಾಗಿದೆ ಎಂದು ಯಕ್ಷಗಾನ ಗುರು, ಚಿಂತಕ ಕೃಷ್ಣಮೂರ್ತಿ ಉರಾಳ ಹೇಳಿದರು. ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಸರೆಯಲ್ಲಿ ನಡೆದ ತಿಂಗಳ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮ ಏಕವ್ಯಕ್ತಿ ತಾಳಮದ್ದಳೆ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಯಕ್ಷ ಸಾಹಿತಿ ಪಿ.ವಿ ಆನಂದ್, ಹಿಮ್ಮೇಳ ಸಂಯೋಜಕ ವೆಂಕಟೇಶ್ ವೈದ್ಯ, ಯು ಚಾನೆಲ್ ಮುಖ್ಯಸ್ಥ ಪ್ರಸಾದ್ ರಾವ್ ಉಪಸ್ಥಿತರಿದ್ದರು. ಶಿಕ್ಷಕ ಸತೀಶ್ ವಡ್ಡರ್ಸೆ ನಿರೂಪಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಾಸ್ತಾವಿಕವಾಗಿ ಮಾತನಾಡಿದರು.