ಮಣಿಪಾಲ, ಜೂ.26: ವಿಶ್ವಮಾನ್ಯತೆ ಪಡೆದ ಕನ್ನಡದ ಅಗ್ರಗಣ್ಯ ಲೇಖಕರಾಗಿದ್ದ ಪ್ರೊ.ಯು.ಆರ್.ಅನಂತಮೂರ್ತಿಯವರ ‘ಶೈಕ್ಷಣಿಕ ತತ್ವಜ್ಞಾನ’ದ ಕುರಿತು ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವಿಶ್ವವಿದ್ಯಾಲಯವು ಪಿ.ಎಚ್.ಡಿ. ಪದವಿಯೊಂದಿಗೆ ಗೌರವಿಸಿದೆ. ಪ್ರಸ್ತುತ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆಂಡ್ ಸೈನ್ಸಸ್ ನ (ಜಿಸಿಪಿಎಎಸ್) ಮುಖ್ಯಸ್ಥರಾಗಿರುವ ಪ್ರೊ. ವರದೇಶ್ ಹಿರೇಗಂಗೆ ಇವರು ಈ ಸಂಶೋಧನಾ ಮಹಾಪ್ರಬಂಧವನ್ನು ಮಂಡಿಸಿದ್ದರು. ಸದ್ಯ ಆಂಧ್ರಪ್ರದೇಶದಲ್ಲಿಯ ಅಪೋಲೋ ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಡಾ.ಎಚ್.ವಿನೋದ್ ಭಟ್ ಅವರು ಈ ಪ್ರಬಂಧದ ಮಾರ್ಗದರ್ಶಕರಾಗಿದ್ದರು. ಜ್ಞಾನಪೀಠ ಪ್ರಶಸ್ತಿ ಪಡೆದ ಲೇಖಕರಾಗಿದ್ದ ಪ್ರೊ.ಅನಂತಮೂರ್ತಿಯವರು ತಮ್ಮ ಜೀವನದ ಬಹುಪಾಲು ಸಮಯವನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿಯೂ ಮತ್ತು ನಾಲ್ಕು ವರ್ಷಗಳ ಕಾಲ ಕೇರಳದ ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯದ ಕುಲಪತಿಗಳಾಗಿಯೂ ಕಾರ್ಯನಿರ್ವಹಿಸಿದ್ದರು. ಸಂಶೋಧನಾ ಪ್ರಬಂಧವು ಪೂರ್ವ ಮತ್ತು ಪಶ್ಚಿಮದ ದೃಷ್ಠಿಕೋನಗಳ ಹಿನ್ನೆಲೆಯೊಂದಿಗೆ ಪ್ರೊ.ಅನಂತಮೂರ್ತಿಯವರ ಆತ್ಮಕಥೆ, ಶಿಕ್ಷಣದ ಕುರಿತು ಅವರ ಮಾತು ಮತ್ತು ಲೇಖನಗಳು, ಘಟಿಕೋತ್ಸವ ಭಾಷಣಗಳು, ತರಗತಿಯಲ್ಲಿನ ಅವರ ಉಪನ್ಯಾಸಗಳು ಮತ್ತು ಸಂದರ್ಶನಗಳನ್ನು ಆಧರಿಸಿ ತನ್ನ ತೀರ್ಮಾನಗಳನ್ನು ಸಿದ್ಧಪಡಿಸಿದೆ.
ಸಂಶೋಧನೆಯು ಪ್ರೊ.ಅನಂತಮೂರ್ತಿಯವರ ಪ್ರಸಿದ್ಧ ಪರಿಕಲ್ಪನೆಗಳಾದ ‘ಆಧುನಿಕತೆ, ಸಮಾನತೆ ಮತ್ತು ಆಧ್ಯಾತ್ಮಿಕತೆ’ ಇವುಗಳ ಆಚೆಗೆ ಹೋಗಿ ಇವರ ತಾತ್ವಿಕತೆಯನ್ನು ‘ಇಕೋ ಎಗೆಲೆಟೇರಿಯನ್ ಅದ್ವೈತಿಸಂ’ ಎಂದು ಗುರುತಿಸುತ್ತದೆ. ಅವರ ಶೈಕ್ಷಣಿಕ ಪರಿಕಲ್ಪನೆಗಳಾದ ‘ಸಮಾನತೆ, ಶ್ರೇಷ್ಠತೆ ಮತ್ತು ವಿಸ್ತರಣೆ’ ಇವುಗಳ ಆಚೆಗೆ ಹೋಗಿ ಶಿಕ್ಷಣದ ಉದ್ದೇಶ, ಪಠ್ಯಕ್ರಮ, ಶೈಕ್ಷಣಿಕ ವಿಧಾನಗಳು, ಶಿಕ್ಷಕ, ಶೈಕ್ಷಣಿಕ ಮಾಧ್ಯಮ ಮತ್ತು ಶೈಕ್ಷಣಿಕ ಮುಂದಾಳತ್ವದ ಪಾತ್ರವನ್ನು ವಿಶ್ಲೇಷಿಸುತ್ತದೆ. ಪ್ರೊ.ಅನಂತಮೂರ್ತಿಯವರ ಚಿಂತನೆಯಲ್ಲಿ ಸಾಮಾನ್ಯವಾಗಿ ಗುರುತಿಸಲಾಗುವ ಸಮಾಜವಾದ ಮತ್ತು ಅಸ್ತಿತ್ವವಾದಿ ನೆಲೆಗಳ ಆಚೆಗೆ ಹೋಗಿ, ಸಂಶೋಧನೆಯು ಅವರ ಯೋಚನೆಯಲ್ಲಿ ಗಾಂಧೀಜಿ, ಗುರುದೇವ ಠಾಗೋರ್ ಮತ್ತು ಡಾ. ಅಂಬೇಡ್ಕರ್ ಚಿಂತನೆಯ ಅಂಶಗಳನ್ನು ಗುರುತಿಸುತ್ತದೆ. ಸಂಶೋಧನಾ ಪ್ರಬಂಧವನ್ನು ಸಿದ್ದಪಡಿಸಿದ ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಆರಂಭದ ಕೆಲವರ್ಷ ಪತ್ರಕರ್ತರಾಗಿದ್ದು ನಂತರ ಮಾಹೆಯ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಂಮ್ಯುನಿಕೇಷನ್ನಿನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಸಂಶೋಧನೆಯ ಮಾರ್ಗದರ್ಶಿಯಾಗಿದ್ದ ಡಾ. ಎಚ್ ವಿನೋದ್ ಭಟ್ ಮುಂಚೆ ಮಾಹೆಯ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಈ ಸಂಶೋಧನೆಯ ಕುರಿತು ಮಾಹೆಯ ಸಹಕುಲಾಧಿಪತಿಗಳಾದ ಡಾ.ಎಚ್.ಎಸ್.ಬಲ್ಲಾಳ್ ಹಾಗೂ ಕುಲಪತಿಗಳಾದ ಲೆ.ಜ.ಡಾ.ಎಂ.ಡಿ.ವೆಂಕಟೇಶ್ ಇವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.