ಉಡುಪಿ, ಜೂ.12: ವಿದ್ಯೆಯ ಮುಖ್ಯಕ್ಷೇತ್ರವಾದ ಉಡುಪಿಯಲ್ಲಿ ವಿದ್ವಾಂಸರ ನಾಡಿನಲ್ಲಿ ಮಾಗಿದ ವಿದ್ವಾಂಸರು ಹೇಗಿರುತ್ತಾರೆ ಎಂಬುದಕ್ಕೆ ಬೈಲೂರು ಪದ್ಮನಾಭ ತಂತ್ರಿಗಳು ಉದಾಹರಣೆಯಾಗಿದ್ದಾರೆ. ಬೈಲೂರು ಪದ್ಮನಾಭ ತಂತ್ರಿಗಳ ಪ್ರತಿರೂಪದಂತಿರುವ ಸಾಲಿಗ್ರಾಮ ಶ್ರೀನಿವಾಸ ಅಡಿಗರಿಗೆ ನೀಡಿರುವುದು ಅತ್ಯಂತ ಯೋಗ್ಯವಾಗಿದೆ. ಜನರಿಗೆ ಧರ್ಮ ಪ್ರಜ್ಞೆ ಜಾಗೃತವಾಗಿರಲು ಜ್ಯೋತಿಷ್ಯ ಶಾಸ್ತ್ರ ವೂ ಕಾರಣವಾಗಿದೆ. ಜ್ಯೋತಿಷ್ಯ ಶಾಸ್ತ್ರ ಗಣಿತವನ್ನು ಆಶ್ರಯಿಸಿದೆ. ಇಂತಹಾ ಕಠಿಣ ಗಣಿತ ವನ್ನು ಬಲ್ಲ ಅಪರೂಪದ ವಿದ್ವಾಂಸರು ಅಡಿಗರು ಆಗಿದ್ದಾರೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು. ಅವರು ಕೀರ್ತಿಶೇಷ ಬೈಲೂರು ಅನಂತಪದ್ಮನಾಭ ತಂತ್ರಿಗಳ ಜನ್ಮಶತಮಾನೋತ್ಸವದ ಸಂಸ್ಮರಣೆಯಲ್ಲಿ ಪ್ರೊ. ಸಾಲಿಗ್ರಮ ಶ್ರೀನಿವಾಸ ಅಡಿಗರಿಗೆ ಕೊಡಮಾಡಿದ ಸಿದ್ಧಾಂತ ಸಾಮ್ರಾಟ್ ಎಂಬ ಬಿರುದನ್ನು ಮತ್ತು ಪ್ರಶಸ್ತಿಯನ್ನು ಮತ್ತು ಐವತ್ತು ಸಹಸ್ರ ರೂಪಾಯಿಗಳನ್ನು ನೀಡಿ ಆಶಿರ್ವದಿಸಿದರು. ಇದೇ ಸಂದರ್ಭದಲ್ಲಿ ಪರ್ಯಾಯ ಮಠದ ವತಿಯಿಂದಲೂ ಇಪ್ಪತ್ತೈದು ಸಹಸ್ರ ರೂಪಾಯಿಗಳನ್ನು ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಪರ್ಯಾಯ ಮಠದ ಕಿರಿಯ ಶ್ರೀಪಾದರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
ಅಭಿನಂದನಭಾಷಣ ಗೈದ ವಿದ್ವಾನ್ ಗೋಪಾಲಕೃಷ್ಣ ಜೋಯೀಸರು, ಜ್ಯೋತಿಷ್ಯದ ಗಣಿತ ಸ್ಕಂದದಲ್ಲಿ ಭಾರತದಲ್ಲೇ ಅತ್ಯಂತ ಅಪರೂಪದ ವಿದ್ವಾಂಸರು ಸಾಲಿಗ್ರಾಮ ಶ್ರೀನಿವಾಸ ಅಡಿಗರು. ಕಬ್ಬಿಣದ ಕಡಲೆಯಂತಹ ವಿಷಯಗಳನ್ನು ಅತ್ಯಂತ ಸರಳವಾಗಿ ವಿದ್ಯಾರ್ಥಿಗಳಿಗೆ ಬೋಧಿಸುವ ನಿರ್ಗರ್ವಿ ಸರಳ ವಿದ್ವಾಂಸರಗಿದ್ದಾರೆ. ಉಡುಪಿಯ ಸಂಸ್ಕೃತ ಕಾಲೇಜನ್ನು ಜ್ಯೋತಿಷ್ಯಕ್ಕೆ ಪ್ರಸಿದ್ಧವಾಗುವಂತೆ ಮಾಡಿದವರು. ಕೇವಲ ಪಂಡಿತನಲ್ಲದೇ ಬಹುಮುಖ ಪ್ರತಿಭಾಶಲಿಗಳಾಗಿದ್ದಾರೆ. ಹಿಂದಿ ಭಾಷೆಯ ಪಾಟವ ನಾಟಕ ಕಲೆಯೂ ಇವರಲ್ಲಿ ಮೇಳೈಸಿದೆ.
ನಿವೃತ್ತ ಜೀವನದಲ್ಲೂ ಜ್ಯೋತಿಷ ವಿಶ್ವಕೋಶಕ್ಕೆ ಸಮರ್ಥ ಮಾರ್ಗದರ್ಶನ ನೀಡಿದ್ದಾರೆ. ಇಷ್ಟಾಗಿಯೂ ಅತ್ಯಂತ ವಿನೀತ ವ್ಯಕ್ತಿತ್ವ ಇವರದು.
ವೇದಿಕೆಯಲ್ಲಿ ಎಸ್. ಎಮ್. ಎಸ್. ಪಿ ಸಭಾದ ಕಾರ್ಯದರ್ಶಿಗಳಾದ ವಿದ್ವಾನ್ ಗೋಪಾಲಕೃಷ್ಣ ಜೋಯೀಸರು, ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯ, ಪ್ರಸಿದ್ಧ ಜ್ಯೋತಿಷಿಗಳಾದ ವಿದ್ವಾನ್ ಮುರಳೀಧರ ತಂತ್ರಿ, ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತ್ಯನಾರಾಯಣ ರಾವ್ ಮತ್ತು ಅತುಲ್ ಕುಡ್ವ ಉಪಸ್ಥಿತರಿದ್ದರು. ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಗಳಾದ ಗಜಾನನ ಭಟ್ಟ, ಆದಿತ್ಯ ಎ.ಎಸ್. ಮತ್ತು ವಿನಯ ಹೆಗಡೆ ವೇದಘೋಷಗೈದರು. ಡಾ. ರಾಧಾಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.