ತೆಂಕನಿಡಿಯೂರು, ಜೂ.7: ಸಹಕಾರ, ಸಹಬಾಳ್ವೆ ಮತ್ತು ವ್ಯಕ್ತಿತ್ವ ವಿಕಸನ, ಸಾಮಾಜಿಕ ಸೇವೆಯ ಅರಿವು, ಶ್ರಮದಾನ, ಹಿತಮಿತದ ಜೀವನ ಶೈಲಿ ಅರಿವಿಕೆಗೆ ಒಂದು ಅದ್ಭುತ ವೇದಿಕೆ ರಾಷ್ಟ್ರೀಯ ಸೇವಾ ಯೋಜನೆ. ಶಿಬಿರದ ವೇಳಾಪಟ್ಟಿಯು ಜೀವನ ಶಿಕ್ಷಣಕ್ಕೆ ಅಗತ್ಯವಿರುವ ವಿಷಯಗಳನ್ನೊಳಗೊಂಡಿದ್ದು ಸಮಯ ಪರಿಪಾಲನೆ ಯೊಂದಿಗೆ, ವಿದ್ಯಾರ್ಥಿಗಳಿಗೆ ಸಮಯದ ಮೌಲ್ಯವನ್ನು ಕಲಿಸಿಕೊಡುತ್ತದೆ. ಅಲ್ಲದೆ ವಿದ್ಯಾರ್ಥಿಗಳಲ್ಲಿ ಸ್ವಾರ್ಥ ಮನೋಭಾವನೆಯನ್ನು ತೊಡೆದು ಕೃತಜ್ಞತೆಯನ್ನು ವ್ಯಕ್ತಪಡಿಸುವ ಮನೋಭಾವ ಹೆಚ್ಚಿಸುವ ಅಗತ್ಯವಿದೆ ಎಂದು ತೆಂಕನಿಡಿಯೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಶ್ವನಾಥ ಕರಬ ಹೇಳಿದರು. ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಏಳು ದಿನಗಳ ಪರಿಯಂತ ಪದವಿ ಕಾಲೇಜಿನ 100 ವಿದ್ಯಾರ್ಥಿಗಳು ಸರಕಾರಿ ಪದವಿಪೂರ್ವ ಕಾಲೇಜು ತೆಂಕನಿಡಿಯೂರು ಗರಡಿ ಮಜಲುನಲ್ಲಿ ನಡೆದ ವಾರ್ಷಿಕ ವಿಶೇಷ ಶಿಬಿರದಲ್ಲಿ ಶ್ರಮದಾನ, ಸಾಂಸ್ಕೃತಿಕ ಕಾರ್ಯಕ್ರಮ ಶೈಕ್ಷಣಿಕ ಕಾರ್ಯಕ್ರಮ, ಜಾಗೃತಿ ಕಾರ್ಯಕ್ರಮ, ಸ್ವಚ್ಛತೆ ಮತ್ತು ಸಮಯ ಪರಿಪಾಲನೆ, ಹಾಗೂ ದೈನಂದಿನ ಜೀವನಕ್ಕೆ ಅಗತ್ಯ ಇರುವ ಕಲೆ ಶಿಕ್ಷಣದ ಬಗ್ಗೆ ತರಬೇತಿ ನೀಡಲಾಯಿತು.
ಸಮಾರೋಪದ ಅಧ್ಯಕ್ಷತೆಯನ್ನು ಪದವಿ ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥರಾದ ನಿತ್ಯಾನಂದ ವಿ ಗಾಂವ್ಕರ್ ವಹಿಸಿದ್ದು ಶಿಬಿರದ ಯಶಸ್ವಿ ನಿರ್ವಹಣೆಗೆ ಕಾರಣಿಭೂತರಾದ ಯೋಜನಾಧಿಕಾರಿಗಳನ್ನು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವೇದಿಕೆಯಲ್ಲಿ ಕಾರ್ಯಕ್ರಮ ಯೋಜನಾಧಿಕಾರಿ ಡಾ. ರಘು ನಾಯ್ಕ, ಹಾಗೂ ಮಮತಾ, ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ, ವಾಣಿಜ್ಯ ವಿಭಾಗ ಮುಖ್ಯಸ್ಥರಾದ ಬಿಂದು ಟಿ., ಆಂಗ್ಲ ಭಾಷಾ ಸಹಾಯಕ ಪ್ರಾಧ್ಯಾಪಕರಾದ ಡಾ. ಗೀತಾ, ಸಮಾಜಕಾರ್ಯ ವಿಭಾಗದ ಉಪನ್ಯಾಸಕರಾದ ಸುಮತಿ, ಶಿಬಿರದ ವಿದ್ಯಾರ್ಥಿ ನಾಯಕರಾದ ಯವನಿಕ, ದ್ವಿತೀಯ ಬಿಸಿಎ, ಅಂಕಿತ್ ಕುಮಾರ್, ದ್ವಿತೀಯ ಬಿಕಾಂ, ಸ್ಪೂರ್ತಿ ಕುಮಾರ್, ದ್ವಿತೀಯ ಬಿಬಿಎ, ಹಾಗೂ ಅನುಷಾ ದ್ವಿತೀಯ ಬಿ.ಎಸ್.ಡಬ್ಲ್ಯೂ ಉಪಸ್ಥಿತರಿದ್ದರು. ವಿವಿಧ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ಶಿಬಿರಾರ್ಥಿಗಳಿಗೆ ಮತ್ತು ಗುಂಪುಗಳಿಗೆ ಬಹುಮಾನ ವಿತರಿಸಲಾಯಿತು. ಸ್ಪೂರ್ತಿ ಕುಮಾರ್ ಕಾರ್ಯಕ್ರಮದ ವರದಿ ವಾಚನಗೈದರು. ಗ್ರೀಷ್ಮ ಸ್ವಾಗತಿಸಿ, ಶರಣ್ಯ ಕಾರ್ಯಕ್ರಮ ನಿರ್ವಹಿಸಿದರು.