ಉಡುಪಿ, ಜೂ.6: ಸುಶಿಕ್ಷಿತ ಮಹಿಳೆ ತನ್ನ ಸಂಸಾರವನ್ನು ಉತ್ತಮ ಮಾರ್ಗದಲ್ಲಿ ನಡೆಸಿಕೊಂಡು ಹೋಗುವುದರಿಂದ ಸಮಾಜದ ಸ್ವಾಸ್ಥ್ಯ ಚೆನ್ನಾಗಿರುತ್ತದೆ. ಆದ್ದರಿಂದ ಪ್ರತೀ ಹೆಣ್ಣು ಮಗು ತನ್ನ ಜೀವನದಲ್ಲಿ ಉತ್ತಮವಾಗಿ ಬದುಕು ಕಟ್ಟಿಕೊಳ್ಳಲು ಶಿಸ್ತಿನಿಂದ ಕೂಡಿದ ಜೀವನ ನಡೆಸಬೇಕು, ಅದಕ್ಕಾಗಿ ವಿದ್ಯೆ ಅಗತ್ಯ. ವಿದ್ಯಾವಂತರಾಗಿ ಉತ್ತಮ ನಾಗರಿಕರಾಗಿರಿ ಎಂದು ಹಿರಿಯಡ್ಕ ಜಿನೆಸಿಸ್ ಪ್ಯಾಕೇಜಿಂಗ್ ಮತ್ತು ಮ್ಯಾಸಿಲಿ ಇಂಡಸ್ಟ್ರೀಸ್ ನ ನಿರಾಲಿ ವೋರಾ ಹೇಳಿದರು. ಅವರು ಬಾಲಕಿಯರ ಪದವಿಪೂರ್ವ ಕಾಲೇಜು ಉಡುಪಿ ಇಲ್ಲಿನ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡುತ್ತಿದ್ದರು. ‘ಒನ್ ಗುಡ್ ಸ್ಟೆಪ್’ ಸ್ವಯಂ ಸೇವಾ ಸಂಸ್ಥೆಯ ಸಂಸ್ಥಾಪಕಿ ಅಮಿತಾ ಪೈ ಹೆಣ್ಣು ಮಕ್ಖಳು ಹೆಚ್ಚು ಹೆಚ್ಚು ಆತ್ಮವಿಶ್ವಾಸದಿಂದ ಕೆಲಸ ಮಾಡಿದರೆ ಸಮಾಜದಲ್ಲಿ ಉತ್ತಮ ಸ್ಥಾನ ಮಾನ ಪಡೆದು ಗೌರವಕ್ಕೆ ಪಾತ್ರರಾಗಬಹುದು ಎಂದರು.
ನವನೀತ್ ಪಬ್ಲಿಕೇಶನ್ ನ ಸುಮಾರು ಮೂರು ಲಕ್ಷ ರೂಪಾಯಿ ಮೌಲ್ಯದ ಉತ್ತಮ ಗುಣಮಟ್ಟದ ನೋಟ್ ಪುಸ್ತಕಗಳನ್ನು ವಿತರಿಸುವ ಮೂಲಕ ಪ್ರತೀವರ್ಷ ಸಮಾಜಮುಖಿ ಕಾರ್ಯಕ್ರಮವನ್ನು ನಡೆಸುತ್ತಿರುವುದಕ್ಕೆ ಸಂಸ್ಥೆಯ ಎಸ್.ಡಿ.ಎಂ.ಸಿ ವತಿಯಿಂದ ಗೌರವಾಧ್ಯಕ್ಷೆ ತಾರಾದೇವಿ ದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಜಿಲ್ಲಾ ಶಿಕ್ಷಣ ಮತ್ತು ಶಿಕ್ಷಕ ತರಬೇತಿ ಸಂಸ್ಥೆ (ಡಯಟ್) ಉಡುಪಿ ಇದರ ಉಪಪ್ರಾಂಶುಪಾಲ, ಶಿಕ್ಷಣ ತಜ್ಞರಾದ ಡಾ. ಅಶೋಕ ಕಾಮತ್ ಮಾತನಾಡಿ ಸಮಾಜಕ್ಕೆ ಏನನ್ನಾದರೂ ಕೊಡಬೇಕೆಂದು ಸಂಕಲ್ಪ ಮಾಡಿಕೊಂಡರೆ, ವಯಸ್ಸಿನ ಮಿತಿ ಇಲ್ಲ, ಕೊಡುವ ಸಂಕಲ್ಪ ಬೇಕು ಎಂದು ಪುಸ್ತಕ ವಿತರಣೆ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕಿ ಮೋಹಿನಿ ನಿರೂಪಿಸಿ, ಸುಚಿತ್ರ ವಂದಿಸಿದರು. ಮುಖ್ಯ ಶಿಕ್ಷಕಿ ಇಂದಿರಾ, ಹಿರಿಯ ಶಿಕ್ಷಕಿ ಜ್ಯೋತಿ ಹಾಗೂ ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು.