ಉಡುಪಿ: ರಾಜ್ಯದಲ್ಲಿ ಗೋ ಸಂರಕ್ಷಣೆಯ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಗೋಶಾಲೆಗಳಿಗೆ ಆರ್ಥಿಕ ಶಕ್ತಿ ತುಂಬುವ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಶೇಷ ಮುತುವರ್ಜಿ ವಹಿಸಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ ಎ ಮತ್ತು ಬಿ ವರ್ಗದ ದೇವಸ್ಥಾನಗಳ ಆದಾಯದ 10% ವನ್ನು ಗೋಶಾಲೆಗಳಿಗೆ ವಿನಿಯೋಗಿಸಲು ಈ ಬಾರಿಯ ಬಜೆಟ್‌ನಲ್ಲಿ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ ಯವರಿಗೆ ಮನವಿ ಸಲ್ಲಿಸಿರುವುದಾಗಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಎ ಸುವರ್ಣ ತಿಳಿಸಿದ್ದಾರೆ.
ಭಾರತದ ಸಂಸ್ಕೃತಿಯಲ್ಲಿ ಗೋವುಗಳಿಗೆ ಪ್ರಧಾನ
ಪಾತ್ರವಿದೆ. ಹಲವಾರು ಕಾರಣಗಳಿಂದ ಅನಾಥವಾಗುವ ಗೋವುಗಳ ರಕ್ಷಣೆಯ ಸದುದ್ದೇಶದಿಂದ ನಮ್ಮ ರಾಜ್ಯದಲ್ಲಿ ಹಲವಾರು ಗೋಶಾಲೆಗಳು ಕಾರ್ಯನಿರ್ವಹಿಸುತ್ತಿದೆ.
ಈಗಾಗಲೇ ಸರಕಾರ ಗೋ ಸಂರಕ್ಷಣೆಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದರೂ, ಗೋಶಾಲೆಗಳು ಆರ್ಥಿಕವಾಗಿ ತೀರ ಸಂಕಷ್ಟ ಪರಿಸ್ಥಿತಿಯಲ್ಲಿ ಗೋರಕ್ಷಣೆಯ ಸೇವೆಯಲ್ಲಿ ತೊಡಗಿಸಿಕೊಂಡಿದೆ.
ಈಗಾಗಲೇ ಈ ಮಹತ್ವದ ಸೇವಾ ಕಾರ್ಯದಲ್ಲಿ
ತೊಡಗಿಸಿಕೊಂಡಿರುವ ಗೋಶಾಲೆಗಳಿಗೆ ಆರ್ಥಿಕ ಚೈತನ್ಯ ನೀಡುವ ಉದ್ದೇಶದಿಂದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ ಎ ಮತ್ತು ಬಿ ವರ್ಗದ ದೇವಸ್ಥಾನಗಳ ಆದಾಯದ 10% ವನ್ನು ಗೋಶಾಲೆಗಳಿಗೆ ವಿನಿಯೋಗಿಸಲು ಆದೇಶ ನೀಡಿದಲ್ಲಿ ಕೋಟ್ಯಾಂತರ ರೂಪಾಯಿ ಅನುದಾನದ ಸಂಗ್ರಹವಾಗಲಿದ್ದು ಈ ಮೂಲಕ ಗೋ ಸಂರಕ್ಷಣೆಯಲ್ಲಿ ನಿರತವಾಗಿರುವ ಗೋಶಾಲೆಗಳ ಅಭಿವೃದ್ಧಿಗೆ ಹಾಗೂ ರಾಜ್ಯ ಸರಕಾರ ಪ್ರತಿ ಜಿಲ್ಲೆಗಳಲ್ಲೂ ಗೋಶಾಲೆಗಳನ್ನು ಆರಂಭಿಸುವ ಯೋಜನೆಗೂ ಸಹಕಾರವಾಗಲಿದೆ ಎಂದು ಯಶ್ಪಾಲ್ ಸುವರ್ಣ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.