ಉಡುಪಿ: ಸಾರ್ವಜನಿಕ ಬಾವಿ ನಿರ್ಮಿಸುವುದು, ಸಾಲು ಮರಗಳನ್ನು ನೆಡುವುದು, ವಿಶ್ರಾಂತಿಗೆ ಅನುಕೂಲಗಳನ್ನು ಒದಗಿಸುವುದು ಇವೆಲ್ಲವೂ ಬಹು ಹಿಂದಿನಿಂದಲೂ ನಡೆದು ಬಂದ ಭಾರತೀಯ ಪರಂಪರೆ. ಇದರ ಮುಂದುವರಿದ ಭಾಗವಾಗಿ ಇಂದು ಶ್ರೀ ಕೃಷ್ಣನ ಆರಾಧನೆ ಮಾಡಲು ಭಾವೀ ಸಮೀರ ವಾದಿರಾಜ ತೀರ್ಥರು, ಪುರಂದರ ದಾಸರು, ಕನಕದಾಸರು ಮುಂತಾದ ದಾಸವರೇಣ್ಯರು ನಡೆದಾಡಿದ ಪರಮ ಪವಿತ್ರವಾದ ಉಡುಪಿಯ ರಥಬೀದಿಯಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಇನ್ನರ್ ವ್ಹೀಲ್ ಸಂಸ್ಥೆಯವರು ಸಿಮೆಂಟ್ ಬೆಂಚುಗಳನ್ನು ಅಳವಡಿಸಿ ಶ್ರೀಕೃಷ್ಣನ ಆರಾಧನೆ ಮಾಡಿದ್ದಾರೆ. ಇದು ಶ್ರೀಕೃಷ್ಣನಿಗೆ ಪ್ರಿಯವಾದ ಸೇವೆ.
ಇನ್ನರ್ ವ್ಹೀಲ್ ಸಂಸ್ಥೆ ತನ್ನ ಹೆಸರಿಗನುಣುವಾಗಿ ಗುಪ್ತವಾಗಿ ಇಂತಹ ಕಾರ್ಯಕ್ರಮಗಳನ್ನು ನಡೆಸಿದರೂ ಬಹಿರಂಗದಲ್ಲಿ ಅಂತಹ ಸತ್ಕಾರ್ಯಗಳಿಗೆ ಸಾರ್ವತ್ರಿಕ ಮನ್ನಣೆ ಸಿಗುತ್ತದೆ. ಇಂತಹ ಜನೋಪಯೋಗಿ ಕಾರ್ಯಗಳು ಇನ್ನರ್ ವ್ಹೀಲ್ ಸಂಸ್ಥೆಯಿಂದ ಸಾಕಷ್ಟು ಹರಿದು ಬರಲಿ ಎಂದು ಉಡುಪಿ ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಉಡುಪಿ ರಥಬೀದಿಯಲ್ಲಿ ಉಡುಪಿಯ ಇನ್ನರ್ ವ್ಹೀಲ್ ಸಂಸ್ಥೆಯವರು ಒದಗಿಸಿದ 10 ಸಿಮೆಂಟ್ ಬೆಂಚುಗಳನ್ನು ಸಾರ್ವಜನಿಕ ಉಪಯೋಗಕ್ಕೆ ಹಸ್ತಾಂತರಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿ ಇನ್ನರ್ ವ್ಹೀಲ್ ಜಿಲ್ಲೆ 318ರ ಚೇರ್‌ಮನ್ ಪುಷ್ಪಾ ಗುರುರಾಜ್ ಇನ್ನರ್ ವ್ಹೀಲ್ ಸಂಘಟನೆಯ ಸೇವ ಪರಂಪರೆಯನ್ನು ವಿವರಿಸಿ ಶುಭ ಹಾರೈಸಿದರು.
ಇನ್ನರ್ ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಶುಭಾ ಎಸ್ ಬಾಸ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಕಾರ್ಯದರ್ಶಿ ಶಾಲಿನಿ ರಾಘವೇಂದ್ರ ವಂದಿಸಿದರು.