Home ಸುದ್ಧಿಗಳು ಪ್ರಾದೇಶಿಕ ಪುರೋಹಿತರಿಂದ ಧರ್ಮದ ಸಂರಕ್ಷಣೆ ಸಾಧ್ಯ : ಪುತ್ತಿಗೆ ಶ್ರೀ

ಪುರೋಹಿತರಿಂದ ಧರ್ಮದ ಸಂರಕ್ಷಣೆ ಸಾಧ್ಯ : ಪುತ್ತಿಗೆ ಶ್ರೀ

256
0

ಉಡುಪಿ, ಮೇ 26: ಸಮಾಜದಲ್ಲಿ ಧರ್ಮ ಸ್ಥಾಪನೆಯಾಗಬೇಕಾದರೆ ಪುರೋಹಿತರ ಪಾತ್ರ ಬಹುಮುಖ್ಯವಾದದ್ದು. ಅನೇಕ ಸಮಸ್ಯೆಗಳು ಎದುರಾದಾಗ ಪುರೋಹಿತರು ಮಾರ್ಗದರ್ಶನವನ್ನು ನೀಡುತ್ತಾರೆ. ಕಷ್ಟದಲ್ಲಿರುವ ಜನಸಾಮಾನ್ಯರಿಗೆ ಪುರೋಹಿತರು ಮಂತ್ರಗಳಿಂದ ಕಷ್ಟವನ್ನು ದೂರ ಮಾಡುತ್ತಾರೆ. ಇಂತಹ ಪುರೋಹಿತರ ಸಂರಕ್ಷಣೆ ಈ ಕಾಲಘಟ್ಟದಲ್ಲಿ ಅತ್ಯಗತ್ಯವಾಗಿದೆ. ಪುರೋಹಿತರ ಸಂರಕ್ಷಣೆಗಾಗಿ ವೈದಿಕ ಧರ್ಮದ ಪ್ರಚಾರಕ್ಕಾಗಿ ಎಲ್ಲರೂ ತಮ್ಮ ಮಕ್ಕಳನ್ನು ವಿದ್ಯಾಪೀಠಕ್ಕೆ ಸೇರಿಸಬೇಕು ಎಂದು ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಕರೆ ನೀಡಿದರು. ಅವರು ಭಾನುವಾರ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಶ್ರೀ ಪುತ್ತಿಗೆ ವಿದ್ಯಾಪೀಠದ 37ನೆಯ ಘಟಿಕೋತ್ಸವದ ಅಧ್ಯಕ್ಷತೆಯನ್ನು ಅಲಂಕರಿಸಿದ್ದರು. ಇಂದಿನ ಯಾಂತ್ರಿಕ ವಾತಾವರಣದ ಪ್ರಭಾವದಲ್ಲಿ ಎಲ್ಲರೂ ಇಂಜಿನಿಯರಿಂಗ್ – ಮೆಡಿಕಲ್ ಮುಂತಾದ ಲೌಕಿಕ ಶಿಕ್ಷಣವನ್ನು ಬಯಸುತ್ತಿದ್ದಾರೆ. ಆದರೆ ಸ್ವಸ್ತಿ ಪ್ರಜಾಭ್ಯ: ಎಂದು ವಿಶ್ವದ ಕ್ಷೇಮವನ್ನು ನಿಸ್ವಾರ್ಥವಾಗಿ ಬಯಸುವವರು ಪುರೋಹಿತರು. ಇಂಥಹ ಪುರೋಹಿತರ ನಿರ್ಮಾಣ ಅತ್ಯಗತ್ಯವಾಗಿದೆ. ಪುರೋಹಿತರ ನಿರ್ಮಾಣದಿಂದ ಘೋಷಣೆಯಿಂದ ದೇಶದಲ್ಲಿ ಧರ್ಮದ ಸ್ಥಾಪನೆಯಾಗುತ್ತದೆ. ಇಂತಹ ಪುರೋಹಿತರ ನಿರ್ಮಾಣದ ಪ್ರಧಾನ ಆಶಯದೊಂದಿಗೆ ನಾವು ಶ್ರೀ ಪುತ್ತಿಗೆ ವಿದ್ಯಾಪೀಠವನ್ನು ಸ್ಥಾಪನೆ ಮಾಡಿದೆವು.

ಈಗ ದೇಶವಿದೇಶಗಳ ನೂರಾರು ಶಾಖೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಧರ್ಮ ಪ್ರಚಾರದಲ್ಲಿ ನಿರತರಾಗಿರುವುದು ನಮಗೆ ಸಂತಸ ತಂದಿದೆ. ಪ್ರಕೃತ 37ನೆಯ ಘಟಕೋತ್ಸವದಲ್ಲಿ ಮಂಗಳವನ್ನು ಆಚರಿಸಿಕೊಳ್ಳುತ್ತಿರುವ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಅಧ್ಯಯನವನ್ನು ನಡೆಸಿ ಸಮಾಜದಲ್ಲಿ ಉತ್ತಮ ವಿದ್ವಾಂಸರಾಗಿ ಯಶಸ್ಸನ್ನು ಕಾಣುವಂತಾಗಲಿ ಎಂದು ಹಾರೈಸಿದರು. ಈ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಶ್ರೀಕಣ್ವ ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾಕಣ್ವ ವಿರಾಜತೀರ್ಥ ಶ್ರೀಪಾದರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅವರು ವಿದ್ಯೆಯ ಮಹತ್ವ, ವಿನಯಾದಿ ಸದ್ಗುಣಗಳ ಪ್ರಭಾವವನ್ಞು ತಿಳಿಸಿದರು. ಸಮಾಜದ ಮಧ್ಯದಲ್ಲಿರುವ ಈ ಯುವ ವಿದ್ವಾಂಸರು ಗುರುಗಳ ಆಶಯದಂತೆ ಸದ್ಗುಣ -ಸದಾಚಾರ ಸಂಪನ್ನರಾಗಿ ಹತ್ತಾರು ಜನರಿಗೆ ಧಾರ್ಮಿಕ ಮಾರ್ಗದರ್ಶನವನ್ನು ನೀಡುವಂತಾಗಲಿ ಎಂದು ಆಶೀರ್ವದಿಸಿದರು. ಶ್ರೀ ಪುತ್ತಿಗೆ ಮಠದ ಕಿರಿಯಪಟ್ಟದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಮಂಗಳದ ವಿದ್ಯಾರ್ಥಿಗಳಿಗೆ ಉಪದೇಶವನ್ನು ಮಾಡಿ ಅನುಗ್ರಹಿಸಿದರು. ಕಣ್ವ ಮಠಾಧೀಶರಿಗೆ ಪರ್ಯಾಯ ಮಠದಿಂದ ಮಾಲಿಕೆ ಮಂಗಳಾರತಿಯನ್ನು ಪ್ರಸನ್ನಾಚಾರ್ರ್ಯ ಮಾಡಿ ಗೌರವ ವನ್ನು ಅರ್ಪಿಸಿದರು . ಮಂಗಳೂರಿನ ಕದ್ರಿ ದೇವಸ್ಥಾನದ ಅರ್ಚಕರಾದ ವೇದಮೂರ್ತಿ ಪ್ರಭಾಕರ ಅಡಿಗರು ಸಂಪಾದಿಸಿರುವ “ಉದಕ ಶಾಂತಿ* ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

38ನೆಯ ಶ್ರೀ ಪುತ್ತಿಗೆ ವಿದ್ಯಾಪೀಠದ ಶೈಕ್ಷಣಿಕ ವರ್ಷವನ್ನು ಶ್ರೀಪಾದರು ಶಾಂತಿ ಮಂತ್ರವನ್ನು ಉಪದೇಶ ಮಾಡುವ ಮೂಲಕ ಪ್ರಾರಂಭಿಸಿದರು. ಮಂಗಳದ ವಿದ್ಯಾರ್ಥಿಗಳು ವಿವಿಧ ವಿಷಯಗಳ ಅನುವಾದವನ್ನು ಮಾಡಿದರು.ಶ್ರೀಪುತ್ತಿಗೆ ವಿದ್ಯಾಪೀಠದ ಸಾಧನೆ ಹಿರಿಯಡ್ಕ ಸಮೀಪದ ಸುವರ್ಣ ನದಿಯ ಪ್ರಶಾಂತ ಪರಿಸರದಲ್ಲಿ ಕಳೆದ 37 ವರ್ಷಗಳ ಹಿಂದೆ ಪರಮಪೂಜ್ಯ ಪುತ್ತಿಗೆ ಶ್ರೀಪಾದರು ಶ್ರೀ ಪುತ್ತಿಗೆ ವಿದ್ಯಾಪೀಠವನ್ನು ಸ್ಥಾಪಿಸಿದರು. ಅವರು ತಮ್ಮ ಗುರುಗಳಾದ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಆಶಯದಂತೆ ಪೌರೋಹಿತ್ಯ -ಆಗಮ -ವೇದ -ಸಂಸ್ಕೃತ -ವೇದಾಂತದ ಅಧ್ಯಯನಕ್ಕಾಗಿ ಇಲ್ಲಿ ವ್ಯವಸ್ಥೆಯನ್ನು ಮಾಡಿದರು. ಇಲ್ಲಿ ಅಧ್ಯಯನವನ್ನು ಮಾಡಿದ ನೂರಾರು ವಿದ್ಯಾರ್ಥಿಗಳು ದೇಶ-ವಿದೇಶಗಳ ಶ್ರೀ ಪುತ್ತಿಗೆ ಮಠದ ಶಾಖ ಮಠಗಳಲ್ಲಿ ಪಾಠ – ಪ್ರವಚನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ . ಇತ್ತೀಚಿನ ವಾತಾವರಣಕ್ಕೆ ಅನುಗುಣವಾಗಿ ಶ್ರೀ ಪುತ್ತಿಗೆ ವಿದ್ಯಾಪೀಠದಲ್ಲಿ ಲೌಕಿಕ ಶಿಕ್ಷಣದ ಜೊತೆಗೆ ವೈದಿಕ ಶಿಕ್ಷಣವನ್ನು ನೀಡಿ ಮಕ್ಕಳನ್ನು ವಿದ್ವಾಂಸರನ್ನಾಗಿ ರೂಪಿಸುತ್ತಿದೆ.

ಈ ಕಾರ್ಯಕ್ರಮದಲ್ಲಿ ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯ, ಶತಾವಧಾನಿ ರಾಮನಾಥ ಆಚಾರ್ಯ ಉಡುಪಿ, ವಿದ್ವಾನ್ ಪ್ರಕಾಶಾಚಾರ್ಯ ಮುಂಬಯಿ, ವಿದ್ವಾನ್ ರಾಮದಾಸ ಉಪಾಧ್ಯಾಯ ಮುಂಬೈ, ವಿದ್ವಾನ್ ರಾಜೇಶ್ ಭಟ್ ಮುಂಬೈ, ವಿದ್ವಾನ್ ಪ್ರವೀಣಾಚಾರ್ಯ, ಚೆನ್ನೈ, ವಿದ್ವಾನ್ ಕುಂಭಾಸಿ ಸೂರ್ಯನಾರಾಯಣ ಉಪಾಧ್ಯಾಯ, ವಿದ್ವಾನ್ ಶ್ರೀನಿವಾಸಾಚಾರ್ಯ ಹೊನ್ನೆದಿಬ್ಬ ಬೆಳಗಾಂ, ವಿದ್ವಾನ್ ವಿಜಯಸಿಂಹಾಚಾರ್ಯ ತೋಟಂತಿಲ್ಲಾಯ, ವಿದ್ವಾನ್ ಶ್ರೀಪತಿ ಆಚಾರ್ಯ ಪಾಡಿಗಾರು, ವಿದ್ವಾನ್ ಪಂಜ ಭಾಸ್ಕರ್ ಭಟ್, ವಿದ್ವಾನ್ ಕೇಂಜ ಶ್ರೀಧರ ತಂತ್ರಿ, ವಿದ್ವಾನ್ ಶ್ರೀಧರ ಉಪಾಧ್ಯಾಯ ಕುಂಭಾಶಿ, ಶಿಕ್ಷಣ ತಜ್ಞರಾದ ರೋಹಿತ್ ಚಕ್ರತೀರ್ಥ ಮತ್ತು ಅನೇಕ ಜಿಜ್ಞಾಸುವೃಂದ ಭಾಗವಹಿಸಿದ್ದರು. ಶ್ರೀ ಪುತ್ತಿಗೆ ವಿದ್ಯಾಪೀಠದ ಪ್ರಾಚಾರ್ಯರಾದ ವಿದ್ವಾನ್ ಶ್ರೀನಿಧಿ ಆಚಾರ್ಯ ಸ್ವಾಗತಿಸಿದರು. ಡಾ.ಬಿ.ಗೋಪಾಲಾಚಾರ್ಯರು ಶ್ರೀ ಪುತ್ತಿಗೆ ವಿದ್ಯಾಪೀಠದ ಸಾಧನೆಗಳ ಪರಿಚಯವನ್ನು ಮಾಡಿದರು. ವಿದ್ವಾನ್ ಯೋಗೀಂದ್ರ ಭಟ್ ಕಾರ್ಯಕ್ರಮ ನಿರ್ವಹಿಸಿದರು.

ಪ್ರಾರಂಭದಲ್ಲಿ ವೇದವ್ಯಾಸ ದೇವರನ್ನು ರಥಬೀದಿಯಲ್ಲಿ ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆಯ ಮೂಲಕ ವೇದಿಕೆಗೆ ಕರೆತರಲಾಯಿತು. ವಿದ್ಯಾರ್ಥಿಗಳ ಅನುವಾದದ ಬಳಿಕ ಪರ್ಯಾಯ ಶ್ರೀಪಾದರು ಮಂಗಳಾರತಿ ಮಾಡುವುದರ ಮೂಲಕ ಶ್ರೀ ವೇದವ್ಯಾಸ ದೇವರಿಗೆ ಅರ್ಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.