ಉಡುಪಿ, ಮೇ 20: ಶ್ರೀ ಎಲ್ಲೂರು ಲಕ್ಷ್ಮೀನಾರಾಯಣರಾವ್ ಜ್ಯೋತಿಷ್ಕ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಇಂಚರ ಸರ್ಜಿಕಲ್ ಕ್ಲಿನಿಕ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ರವಿವಾರ ಪ್ರಬಂಧ ಸ್ಪರ್ಧೆ ಹಾಗೂ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ನಡೆಯಿತು. 10, 11, ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಶ್ರೀ ಆದಿಶಂಕರಾಚಾರ್ಯರ ಸಂಕ್ಷಿಪ್ತ ಜೀವನ ಚರಿತ್ರೆ ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬೆಳಗ್ಗೆ 9 ಗಂಟೆಗೆ ಶ್ರೀ ಶಂಕರಾಚಾರ್ಯರ ಚಿತ್ರಕ್ಕೆ ದೀಪ ಪ್ರಜ್ವಲನ ಹಾಗೂ ಪುಷ್ಪಾರ್ಚನೆಯನ್ನು ಸಲ್ಲಿಸುವುದರ ಮೂಲಕ ಶ್ರೀ ಸ್ಥಾನಿಕ ಬ್ರಾಹ್ಮಣ ಮಹಾಮಂಡಲ ಮಂಗಳೂರು(ರಿ) ಇದರ ಅಧ್ಯಕ್ಷರಾದ ಕೆ ಮಂಜುನಾಥ್ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಉಡುಪಿಯ ಶ್ರೀ ಶಾರದಾ ಮಂಟಪದ ಕಾರ್ಯದರ್ಶಿ ಪ್ರಭಾಕರ ಭಂಡಿ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿನಿ ಹರ್ಷಿತಾ ರಚಿಸಿದ್ದ ಶ್ರೀ ಶಂಕರಾಚಾರ್ಯರ ಚಿತ್ರವನ್ನು ಪೂಜಾ ಪೀಠದಲ್ಲಿ ಇರಿಸಲಾಯಿತು. ನಂತರ 9:30 ರಿಂದ 11 ಗಂಟೆಯ ತನಕ ಪ್ರಬಂಧ ಸ್ಪರ್ಧೆಯ ಬರವಣಿಗೆಯು ನಡೆಯಿತು. 11 ರಿಂದ 12 ಗಂಟೆಯ ತನಕ ಶ್ರೀ ಶಾರದಾ ಭಜನಾ ಮಂಡಳಿ ಕುಂಜಿಬೆಟ್ಟು ಉಡುಪಿ ಇವರು ಶ್ರೀ ಶಂಕರಾಚಾರ್ಯ ವಿರಚಿತ ಐದು ಸ್ತೋತ್ರಗಳನ್ನು ಸುಶ್ರಾವ್ಯವಾಗಿ ಹಾಡಿದರು. ಸಭಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಶಂಕರ ತತ್ವ ಪ್ರಚಾರ ಸಮಿತಿಯ ಸಂಚಾಲಕರಾದ ಟಿ ವಿಶ್ವನಾಥ ಶಾನಭಾಗ್ ಹಾಗೂ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರವಿರಾಜ್ ಹೆಚ್ ಪಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಇಂಚರ ಸರ್ಜಿಕಲ್ ಕ್ಲಿನಿಕ್ ನ ನಿರ್ದೇಶಕರಾದ ಡಾ. ವೈ ಸುದರ್ಶನ ರಾವ್ ಸ್ವಾಗತಿಸಿ, .ಶ್ರೀ ಎಲ್ಲೂರು ಲಕ್ಷ್ಮಿ ನಾರಾಯಣರಾವ್ ಜ್ಯೋತಿಷ್ಕ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ವೈ ಭುವನೇಂದ್ರ ರಾವ್ ಹಾಗೂ ವೈ ಶಾಂತಿನಾಥ ರಾವ್ ಇವರು ದಿವಂಗತ ಸಾತ್ವಿಕ್ ಶಾಸ್ತ್ರಿ ಸ್ಮಾರಕ ವಿದ್ಯಾರ್ಥಿ ವೇತನವನ್ನು ವಿತರಿಸಿದರು. ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ದಂಡತೀರ್ಥ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ದಿವ್ಯಲಕ್ಷ್ಮಿ, ದ್ವಿತೀಯ ಸ್ಥಾನ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಮ್ಯ ಕೆ. ಡಾ. ವೈ ರವೀಂದ್ರನಾಥ ರಾವ್ ಹಾಗೂ ವೈ ಭುವನೇಂದ್ರ ರಾವ್ ಹಾಗೂ ಮೀರಾ ರಾಜೇಶ್ ಇವರು ತೀರ್ಪುಗಾರರಾಗಿ ಸಹಕರಿಸಿದ್ದರು. ತೀರ್ಪುಗಾರರನ್ನು ಡಾ. ವೈ ಸುದರ್ಶನ್ ರಾವ್ ಹಾಗೂ ಡಾ. ವಿದ್ಯಾ ಎಸ್ ರಾವ್ ಗೌರವಿಸಿದರು. ಕಾರ್ಯಕ್ರಮದ ಸಂಚಾಲಕಿ ಡಾ. ವಿದ್ಯಾ ಎಸ್ ರಾವ್ ವಂದಿಸಿದರು. ಸುನಿತಾ ಪ್ರಸಾದ್ ರಾವ್ ಕಾರ್ಯಕ್ರಮ ನಿರೂಪಿಸಿದರು.