ಮಣಿಪಾಲ, ಮೇ 20: ಮಾಹೆಯ ಗಾಂಧಿಯನ್ ಸೆಂಟರ್ ಫ಼ಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್), ಮತ್ತು ಸಂಸ್ಕೃತಿ ಸಿರಿ ಟ್ರಸ್ಟ್ ಹಿರಿಯಡ್ಕ ಜಂಟಿಯಾಗಿ ಆಯೋಜಿಸಿದ್ದ ಉಡುಪಿ ಜಿಲ್ಲೆಯಲ್ಲಿನ ನೀರಿನ ಬಿಕ್ಕಟ್ಟು ಎಂಬ ವಿಚಾರ ಸಂಕಿರಣ ನಡೆಯಿತು. ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ನಮ್ಮ ನೀರಿನ ಬಳಕೆಯ ಪದ್ಧತಿಯಲ್ಲಿ ಬದಲಾವಣೆ ತರುವಂತೆ ಸಲಹೆ ನೀಡಿದರು. ಪ್ರಕೃತಿಯ ಬಗ್ಗೆ ನಾವೂ ಕಾಳಜಿ ವಹಿಸಿದರೆ ನಿಸರ್ಗ ನಮ್ಮನ್ನು ಕಾಪಾಡುತ್ತದೆ ಎಂದು ಅಭಿಪ್ರಾಯಪಟ್ಟರು. ಜಲಸಮೃದ್ಧ ಪ್ರದೇಶವಾದ ಉಡುಪಿಯಲ್ಲಿ ಮರುಕಳಿಸುವ ತೀವ್ರ ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಉಡುಪಿ ಜಿಲ್ಲಾಡಳಿತವು ಕೆಲವು ದೀರ್ಘಕಾಲಿಕ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಬರಹಗಾರರು, ವಿಜ್ಞಾನಿಗಳು ಮತ್ತು ಉಡುಪಿಯ ನಾಗರಿಕರು ಜಿಲ್ಲಾಡಳಿತಕ್ಕೆ ಕೋರಿಕೆಯನ್ನು ಸಲ್ಲಿಸಿದರು. ವರ್ಷದಲ್ಲಿ ಸುಮಾರು 100 ದಿನಗಳು, ಉಡುಪಿಯು ತೀವ್ರ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ ಮತ್ತು ಇದು ಪ್ರತಿ ವರ್ಷವೂ ಮರುಕಳಿಸುವ ಸನ್ನಿವೇಶವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಭಾಗವಹಿಸಿ ಮಾತನಾಡಿದ ಅವರು, ಮಳೆ ಬಂದರೆ ಈ ಸಮಸ್ಯೆಗಳನ್ನು ಮರೆಯುತ್ತೇವೆ, ಆದರೆ ಬೇಸಿಗೆಯಲ್ಲಿ ಅನೇಕ ನದಿಗಳನ್ನು ಹೊಂದಿಯೂ ಸಹ ನೀರಿನ ಸಮಸ್ಯೆಯಿಂದ ತೀವ್ರವಾಗಿ ಬಳಲುತ್ತೇವೆ ಎಂದರು.
40 ವರ್ಷ ಕಳೆದರೂ ವಾರಾಹಿ ಸುರಂಗದ ಕೊನೆಯಲ್ಲಿ ನೀರಿಲ್ಲದಂತಾಗಿದೆ ಎಂದು ಸಾಹಿತಿ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ವಿಷಾದ ವ್ಯಕ್ತಪಡಿಸಿದರು. ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವುದು, ನಾವು ಅನ್ವೇಷಿಸಬೇಕಾದ ವಿಷಯ. ಅನೇಕ ದೇಶಗಳು ಇದನ್ನು ಮಾಡಿದೆ ಮತ್ತು ಇದನ್ನು ಪರಿಗಣಿಸಬಹುದು ಎಂದರು. ಜಲವಿಜ್ಞಾನಿ ಡಾ.ಉದಯಶಂಕರ್ ಮಾತನಾಡಿ, ಪೂರ್ವ ಮುಂಗಾರು ಮತ್ತು ನಂತರದ ಮುಂಗಾರು ಮಳೆ ಸರಿಯಾಗಿ ಆಗದಿದ್ದರೆ ಉಡುಪಿ ಪ್ರದೇಶ ಸಂಕಷ್ಟಕ್ಕೆ ಸಿಲುಕುತ್ತದೆ. ಬೇರೆ ಯಾವುದೇ ದೊಡ್ಡ ಯೋಜನೆಗಳಿಗೆ ಪ್ರವೇಶಿಸುವ ಬದಲು ಸಣ್ಣ ವೆಂಟೆಡ್ ಅಣೆಕಟ್ಟುಗಳು ಮತ್ತು ಮಳೆ ನೀರು ಕೊಯ್ಲು ಈ ಸಮಸ್ಯೆಗೆ ಪರಿಹಾರವಾಗಿದೆ ಎಂದರು.
ಮರ್ಪ್ಲ್ ನ ಜನರಲ್ ಮ್ಯಾನೇಜರ್ ಬಡ್ಡಿ ಮುರಳಿಕೃಷ್ಣ ಅವರು ಎಂ.ಆರ್.ಪಿ.ಎಲ್ ಸಮುದ್ರದ ನೀರನ್ನು ಹೇಗೆ ಸಂಸ್ಕರಿಸಿ, ಉಪಯೋಗಕ್ಕೆ ಅನುಕೂಲವಾಗುವ ನೀರಾಗಿ ಹೇಗೆ ಪರಿವರ್ತಿಸುತ್ತದೆ ಎಂದು ವಿವರಿಸಿದರು. ಈ ಪ್ರಕ್ರಿಯೆಯು ಖಂಡಿತವಾಗಿಯೂ ಈ ಸಮಯದಲ್ಲಿ ದುಬಾರಿಯಾಗಿದೆ, ಆದರೆ ಹೆಚ್ಚಿನ ಸಂಶೋಧನೆಯಿಂದ ಇದನ್ನು ಕೈಗೆಟಕುವಂತೆ ಮಾಡಲು ಸಾಧ್ಯ ಎಂದರು. ಗುತ್ತಿಗೆದಾರರಿಂದಾಗಿ ವಾರಾಹಿ, ಪಶ್ಚಿಮ ವಾಹಿನಿಯಂತಹ ಯೋಜನೆಗಳು ಜನವಿರೋಧಿ ಯೋಜನೆಗಳಾಗಿ ಪರಿವರ್ತನೆಯಾಗಿವೆ ಎಂದು ಲೇಖಕ ರಾಜಾರಾಂ ತಲ್ಲೂರು ವಿವರಿಸಿದರು. ಸಣ್ಣ ಚೆಕ್ ಡ್ಯಾಂ ಯೋಜನೆಗಳ ಪ್ರಾಮಾಣಿಕ ಅನುಷ್ಠಾನದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಸಾಮೂಹಿಕ ಪ್ರಯತ್ನದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಜಿಲ್ಲಾಡಳಿತಕ್ಕೆ ಅನೇಕ ಶಿಫಾರಸ್ಸುಗಳ ವರದಿಯನ್ನು ಸಲ್ಲಿಸಲಾಗುವುದು. ಅಭಿಜಿತ್ ಅನಿಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಗೌತಮಿ ಕಾಕತ್ಕರ್ ವಂದಿಸಿದರು. ಉಡುಪಿಯ ನಾಗರಿಕರು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.