ಕೋಟ, ಮೇ 19: ಸಾಸ್ತಾನ ಟೋಲ್‌ನಲ್ಲಿ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ವಾಹನಗಳಿಗೆ ವಿನಾಯಿತಿ ಮುಂದುವರಿಸುವಂತೆ ಮತ್ತು ಸ್ಥಳೀಯರಿಂದ ಟೋಲ್ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಶನಿವಾರ ಹೆದ್ದಾರಿ ಜಾಗೃತಿ ಸಮಿತಿ ಸದಸ್ಯರು ಮತ್ತು ಸ್ಥಳೀಯರುದಿಢೀರ್ ಪ್ರತಿಭಟನೆ ನಡೆಸಿದರು. ಕಳೆದ ಹಲವಾರು ವರ್ಷಗಳಿಂದ ಹೋರಾಟದ ಫಲವಾಗಿ ಪರಿಸರದ ವಾಹನಗಳಿಗೆ ಟೋಲ್‌ನಿಂದ ವಿನಾಯಿತಿ ದೊರೆತಿದ್ದು, ನವಯುಗದಿಂದ ಇನ್ನೊಂದು ಕಂಪೆನಿಗೆ ಟೋಲ್ ವಸೂಲಿ ಮಾಡಲು ನೀಡಿದ್ದರಿಂದ ಕಳೆದ ಒಂದು ವಾರದಿಂದ ಸ್ಥಳೀಯರಿಂದ ಟೋಲ್ ವಸೂಲಿ ಮಾಡುತ್ತಿರುವುದಲ್ಲದೇ, ಮನೆಯಲ್ಲಿರುವ ವಾಹನಗಳಿಂದಲೂ ಟೋಲ್ ವಸೂಲಿ ಆಗುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು. ಸಾಸ್ತಾನದ ಶಿವಕೃಪಾದಲ್ಲಿ ಹೆದ್ದಾರಿ ಜಾಗೃತಿ ಸಮಿತಿ ಸಭೆ ನಡೆಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲು ಮುಂದಾದರು. ನೂರಾರು ಜನರು ಟೋಲ್‌ಗೆ ಧಾವಿಸಿ ಪ್ರತಿಭಟನೆ ನಡೆಸಿ ಅಧಿಕಾರಿಗಳನ್ನು ಟೋಲ್ ಹಿಂಪಡೆಯುವಂತೆ ಆಗ್ರಹಿಸಿ ಘೋಷಣೆ ಕೂಗಿದರು. ಆದರೆ ಯಾರೊಬ್ಬ ಅಧಿಕಾರಿಯೂ ಸಮಸ್ಯೆಯನ್ನು ಆಲಿಸದ ಕಾರಣ ಸುಮಾರು ಹತ್ತು ನಿಮಿಷ ಟೋಲ್ ಬಂದ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಇನ್ಸ್ಪೆಕ್ಟರ್: ಪ್ರತಿಭಟನೆ ಕಾವು ಹೆಚ್ಚಿದ ಕಾರಣ ಸ್ಥಳಕ್ಕೆ ಬ್ರಹ್ಮಾವರದ ಇನ್ಸ್ಪೆಕ್ಟರ್ ದಿವಾಕರ್ ಪಿ.ಎಂ ಆಗಮಿಸಿ ಸಮಿತಿಯ ಸದಸ್ಯರೊಂದಿಗೆ ಚರ್ಚಿಸಿದರು. ಸೋಮವಾರ ಹೆದ್ದಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಒದಗಿಸುವ ಬಗ್ಗೆ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದ ಕಾರಣ ಪ್ರತಿಭಟನೆ ಹಿಂಪಡೆದರು.
10 ನಿಮಿಷ ಟೋಲ್‌ನಿಂದ ಮುಕ್ತಿ: ಟೋಲ್‌ನಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ ಕಾರಣ ಟೋಲ್‌ನ ಸಿಬ್ಬಂದಿ ಟೋಲ್ ಬಂದ್ ಮಾಡಿ ವಾಹನಗಳನ್ನು ಶುಲ್ಕ ರಹಿತವಾಗಿ ಬಿಟ್ಟಿದ್ದರಿಂದ ಹಲವಾರು ವಾಹನಗಳು ೧೦ ನಿಮಿಷಗಳ ಕಾಲ ಯಾವುದೇ ಟೋಲ್ ಇಲ್ಲದೇ ಸಂಚಾರ ನಡೆಸಿದವು.
ಮನೆಯಲ್ಲಿ ವಾಹನವಿದ್ದರೂ ಹಣ ಕಡಿತ: ಟೋಲ್‌ನ ಎರಡೂ ಕಡೆ ಮೊದಲ ಲೈನ್ ಸ್ಥಳೀಯರಿಗೆ ಮೀಸಲಿದ್ದು, ಸ್ಥಳೀಯರು ಆಧಾರ್ ಕಾರ್ಡ್ ಮತ್ತು ವಾಹನದ ದಾಖಲೆಗಳನ್ನು ತೋರಿಸಿದರೆ ಟೋಲ್‌ನಿಂದ ವಿನಾಯಿತಿ ಸಿಗುತ್ತಿತ್ತು. ಆದರೆ ಮನೆ ತಲುಪಿದ ಒಂದೆರಡು ಗಂಟೆಗಳಲ್ಲೇ ಕಡಿತವಾದ ಸಂದೇಶ ಮೊಬೈಲ್ ಗೆ ಬಂದಿರುವ ಬಗ್ಗೆ ಹಲವು ದೂರುಗಳು ಕೇಳಿ ಬರುತ್ತಿತ್ತು. ಇದಲ್ಲದೇ ಮನೆಯಲ್ಲೇ ಇದ್ದ ವಾಹನಗಳಿಗೂ ಟೋಲ್ ಶುಲ್ಕ ಕಡಿತಗೊಳ್ಳುತ್ತಿರುವ ಬಗ್ಗೆಯೂ ಅನೇಕರ ದೂರುಗಳು ಕೇಳಿ ಬಂದಿತ್ತು.
ಉಗ್ರ ಪ್ರತಿಭಟನೆಯ ಎಚ್ಚರಿಕೆ: ತಮ್ಮ ಸಮಸ್ಯೆಗೆ ಸೋಮವಾರ ಯಾವುದೇ ಪರಿಹಾರ ದೊರಕದೇ ಇದ್ದಲ್ಲಿ ಎಲ್ಲರೂ ಒಗ್ಗಟ್ಟಾಗಿ ವಿನಾಯಿತಿ ಪಡೆಯಲು ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಶ್ಯಾಮಸುಂದರ ನಾಯರಿ ಎಚ್ಚರಿಸಿದ್ದಾರೆ. ಪ್ರತಿಭಟನೆಯಲ್ಲಿ ಸಮಿತಿಯ ಹಿಂದಿನ ಅಧ್ಯಕ್ಷ ಪ್ರತಾಪ್ ಶೆಟ್ಟಿ, ಪ್ರಮುಖರಾದ ವಿಠಲ ಪೂಜಾರಿ, ಆಲ್ವಿನ್ ಅಂದ್ರಾದೆ ಮತ್ತು ನೂರಾರು ಸ್ಥಳೀಯ ವಾಹನ ಮಾಲೀಕರು ಇದ್ದರು.