Thursday, January 23, 2025
Thursday, January 23, 2025

ಹೀಟ್‌ವೇವ್‌ನಿಂದ ರಕ್ಷಿಸಿಕೊಳ್ಳಲು ಜಿಲ್ಲಾಡಳಿತದಿಂದ ಕಾರ್ಮಿಕರಿಗೆ ಸಲಹೆ

ಹೀಟ್‌ವೇವ್‌ನಿಂದ ರಕ್ಷಿಸಿಕೊಳ್ಳಲು ಜಿಲ್ಲಾಡಳಿತದಿಂದ ಕಾರ್ಮಿಕರಿಗೆ ಸಲಹೆ

Date:

ಉಡುಪಿ, ಮೇ 2: ಪ್ರಸ್ತುತ ಬೇಸಿಗೆ ಹಿನ್ನೆಲೆ, ಸೂರ್ಯನ ಶಾಖದಿಂದ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಹೀಟ್ ವೇವ್ ಸ್ಟೋಕ್ (ಶಾಖದ ಹೊಡೆತ)ದಿಂದಾಗಿ ಕಾರ್ಮಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ, ಜಿಲ್ಲಾಡಳಿತ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಹೊರಗಡೆ ಕೆಲಸ ನಿರ್ವಹಿಸುವ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ, ಬೀದಿ ಬದಿ ವ್ಯಾಪಾರಸ್ಥರ, ವಾಹನ ಚಾಲಕರ ಮತ್ತು ಇತರೆ ವರ್ಗದ ಎಲ್ಲಾ ಕೆಲಸಗಾರರ ಆರೋಗ್ಯವನ್ನು ಕಾಪಾಡುವ ಮತ್ತು ಸುರಕ್ಷತೆಯನ್ನು ಒದಗಿಸುವ ದೃಷಿಯಿಂದ ಜಿಲ್ಲೆಯ ಎಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣದಾರ ಮತ್ತು ಇತರೆ ಉದ್ದಿಮೆಗಳ ಮಾಲಿಕರಿಗೆ ಮತ್ತು ಕಾರ್ಮಿಕರಿಗೆ ಈ ಕೆಳಕಂಡ ಸಲಹೆ-ಸೂಚನೆಗಳನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ತಮ್ಮ ಸುರಕ್ಷತೆಯನ್ನು ಕಾಪಾಡುವ ಹಿನ್ನಲೆಯಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಮನವಿ ಮಾಡಿದೆ. ಕೆಲಸದ ಸ್ಥಳದಲ್ಲಿ ಕಾರ್ಮಿಕರಿಗೆ ತಂಪಾದ ಕುಡಿಯುವ ನೀರು ಮತ್ತು ಎಲೆಕ್ಟ್ರೋಲೈಟ್ ಪೂರಕಗಳ ವ್ಯವಸ್ಥೆಯನ್ನು ಮಾಲೀಕರು ಮಾಡಬೇಕು. ಡಿ-ಹೈಡ್ರೇಟೆಡ್ ಆಗದಂತೆ ಕಾರ್ಮಿಕರು ಮತ್ತು ಎಲ್ಲರೂ ಪ್ರತಿ 20 ನಿಮಿಷಗಳಿಗೊಮ್ಮೆ ಅಥವಾ ಹೆಚ್ಚು ಭಾರಿ ನೀರನ್ನು ಕುಡಿಯಬೇಕು ಹಾಗೂ ಕೆಲಸದ ಮದ್ಯದಲ್ಲಿ ವಿಶ್ರಾಂತಿ ಪಡೆದು ಕೆಲಸ ಮಾಡಲು ಗಮನ ವಹಿಸಬೇಕು. ಶ್ರಮದಾಯಕ ಮತ್ತು ಹೊರಾಂಗಣ ಚಟುವಟಿಕೆಗಳನ್ನು ತಾಪಮಾನ ಕಡಿಮೆ ಇರುವ ಸಮಯದಲ್ಲಿ, ಅಂದರೆ ಬೆಳಗಿನ ಅಥವಾ ಸಂಜೆಯ ಸಮಯದಲ್ಲಿ ನಿರ್ವಹಿಸಬೇಕು. ಕಾರ್ಮಿಕರು ಅದಷ್ಟು ಬೆಳಗೆ, 11 ರಿಂದ ಸಂಜೆ 4 ರವರೆಗೆ ನೇರ ಸೂರ್ಯನ ಬಿಸಿಲಿನಲ್ಲಿ ಕೆಲಸ ನಿರ್ವಹಿಸದಂತೆ ಮಾಲೀಕರು ಎಚ್ಚರ ವಹಿಸಬೇಕು. ಸಾಧ್ಯವಾದಲ್ಲಿ ಬೃಹತ್ ಕಟ್ಟಡ ಮತ್ತು ಇತರೆ ನಿರ್ಮಾಣದಾರರು ಕೆಲಸದ ಪಾಳಿಯನ್ನು ರಾತ್ರಿ ವೇಳೆ ಮಾಡಬಹುದಾಗಿರುತ್ತದೆ. ಹೆಚ್ಚಿನ ಬಿಸಿಲಿನ ತಾಪಮಾನವಿರುವ ಸಮಯದಲ್ಲಿ ಕಾರ್ಮಿಕರಿಗೆ ಕೆಲಸ ಮಾಡಲು ಅನುಕೂಲವಾಗುವಂತೆ ನೆರಳು ಇರುವ ಪ್ರದೇಶವನ್ನು ಮಾಲೀಕರು ಒದಗಿಸಬೇಕು ಅಥವಾ ನೌಕರರು ಮತ್ತು ಕಾರ್ಮಿಕರಿಗೆ ಕೆಲಸ ಸಮಯವನ್ನು ಕಾರ್ಮಿಕರೊಂದಿಗೆ ಸಮಾಲೋಚಿಸಿ ಮರು-ನಿಗದಿಪಡಿಸಿಕೊಳ್ಳಬೇಕು.

ಕೆಲಸದ ಸ್ಥಳದ ಬಳಿ ವಿಶ್ರಾಂತಿ ಪಡೆಯಲು ಗಾಳಿ, ಬೆಳಕು ಮತ್ತು ಕುಡಿಯುವ ನೀರಿನ ವ್ಯವಸ್ಥೆಯೊಂದಿಗೆ ತಾತ್ಕಾಲಿಕ ಶೆಡ್‌ಗಳನ್ನು ಮಾಲೀಕರು ನಿರ್ಮಿಸಬೇಕು. ಕಾರ್ಮಿಕರಿಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹೊರಡಿಸಿದ ಆರೋಗ್ಯ ಸಲಹೆಯನ್ನು ಅನುಸರಿಸಿ, ಕಾರ್ಮಿಕರ ನಿಯಮಿತ ಆರೋಗ್ಯ ತಪಾಸಣೆಯನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಬೇಕು. ಕೆಲಸದ ಸಮಯದಲ್ಲಿ ಕಾರ್ಮಿಕರು ಆದಷ್ಟು ಹತ್ತಿಯ ಮತ್ತು ಶ್ವೇತ ವರ್ಣದ ತುಂಬು ತೋಳಿನ ಅಂಗಿ/ಬಟ್ಟೆ, ಟೋಪಿ ಮತ್ತು ಕೂಲಿಂಗ್ ಗ್ಲಾಸ್ ಧರಿಸಬೇಕು. ಒಳಾಂಗಣದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಂಬಂಧಿಸಿದಂತೆ ಕೊಠಡಿಯ ತಾಪಮಾನವನ್ನು ಕಡಿಮೆ ಮಾಡಲು ಮಾಲೀಕರುಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹೀಟ್ ಸ್ಟ್ರೋಕ್ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯನ್ನು ತಂಪಾದ ಜಾಗಕ್ಕೆ ಸ್ಥಳಾಂತರಿಸುವುದರೊಂದಿಗೆ ಶಾಖದ ಹೊಡೆತದಿಂದ ಬಳಲುತ್ತಿರುವ ವ್ಯಕ್ತಿಯು ಕನಿಷ್ಟ ಬಟ್ಟೆಯನ್ನು ಹೊಂದಿರುವಂತೆ ನೋಡಿಕೊಂಡು, ವ್ಯಕ್ತಿಗೆ, ತಣ್ಣೀರಿನಿಂದ ಸ್ಪಾಂಜ್ ಮಾಡಬೇಕು ಅಥವಾ ಐಸ್ ಪ್ಯಾಕ್‌ಗಳನ್ನು ಉಪಯೋಗಿಸಬೇಕು. ಹೀಟ್ ವೇವ್ ಸ್ಟ್ರೋಕ್‌ಗೆ ಒಳಗಾದ ವ್ಯಕ್ತಿಯಲ್ಲಿ ಯಾವುದೇ ಸುಧಾರಣೆ ಕಂಡುಬರದಿದ್ದರೆ, ತಕ್ಷಣ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಕ್ರಮ ವಹಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಡಾ. ಕೆ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನಿಮಗೆ ಪ್ಯಾಷನ್ ಇದೆಯೇ?

ಸುಬ್ಬನಿಗೆ ಗಾಯಕನಾಗುವ ಆಸೆ. ಸುಬ್ಬಿಗೆ ನರ್ತಕಿಯಾಗುವ ಆಸೆ. ಆದರೆ ಇಬ್ಬರಲ್ಲಿ ವ್ಯತ್ಯಾಸವಿದೆ....

ರಾಷ್ಟ್ರೀಯ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಕಾರ್ಯಾಗಾರ

ಉಡುಪಿ, ಜ.23: ಪ್ರವಾಸೋದ್ಯಮ ಇಲಾಖೆ ವತಿಯಿಂದ ರಾಷ್ಟ್ರೀಯ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ...
error: Content is protected !!