ಉಡುಪಿ, ಮೇ 1: ಉಡುಪಿ ನಗರಸಭೆ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜಿನ ಮಹತ್ವದ ವಾರಾಹಿ ಯೋಜನೆಯ ಮೂಲಕ ಮೇ 15 ರೊಳಗೆ ನೀರು ಪೂರೈಕೆಗೆ ತಕ್ಷಣ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ ನೀಡಿದರು. ಮಣಿಪಾಲ ಶೀಂಬ್ರ ಸೇತುವೆ ಬಳಿ ನಡೆಯುತ್ತಿರುವ ವಾರಾಹಿ ಯೋಜನೆಯ ಪೈಪ್ ಲೈನ್ ಸೇತುವೆ ಕಾಮಗಾರಿ ಪ್ರದೇಶಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಮಗಾರಿಯ ಪ್ರಗತಿಯ ಬಗ್ಗೆ ಮಾಹಿತಿ ಪಡೆದರು.
ನಗರದಲ್ಲಿ ಕುಡಿಯುವ ನೀರು ಸಮಸ್ಯೆ ತಲೆದೋರಿರುವ ಹಿನ್ನಲೆಯಲ್ಲಿ ಕಾಮಗಾರಿಯ ಬಾಕಿ ಉಳಿದಿರುವ ಕೆಲಸಗಳನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಿ 15 ದಿನದಲ್ಲಿ ನೀರು ಪೂರೈಕೆ ಮಾಡುವಂತೆ ಹೇಳಿದರು. ನಗರಸಭೆಯ 35 ವಾರ್ಡ್ ಗಳ ಸದಸ್ಯರು ತಮ್ಮ ವಾರ್ಡಿನಲ್ಲಿ ವಾರಾಹಿ ಯೋಜನೆಗೆ ಸಂಬಂಧಿಸಿದ ಪೈಪ್ ಲೈನ್ ಹಾಗೂ ಕಾಮಗಾರಿಯ ಇತರ ಸಮಸ್ಯೆಗಳನ್ನು ಪಟ್ಟಿ ಮಾಡಿ ಕೂಡಲೇ ಅವುಗಳನ್ನು ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಪರಿಹರಿಸಿ ನೀರು ಸರಬರಾಜಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಈಗಾಗಲೇ ಯೋಜನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಮೂಲಕ ನಿರಾಕ್ಷೇಪಣಾ ಪತ್ರವನ್ನು ಒದಗಿಸಲಾಗಿದ್ದು, ಸಾರ್ವಜನಿಕರಿಗೆ ಕುಡಿಯುವ ನೀರು ಸಮಸ್ಯೆ ಪರಿಹರಿಸಲು ಸಹಕಾರ ನೀಡುವಂತೆ ಹೇಳಿದರು.
ನಗರಸಭಾ ಸದಸ್ಯರಾದ ಪ್ರಭಾಕರ ಪೂಜಾರಿ, ಗಿರೀಶ್ ಅಂಚನ್, ಬಾಲಕೃಷ್ಣ ಶೆಟ್ಟಿ, ಅನಿತಾ ಡಿಸೋಜ, ಹರೀಶ್ ಶೆಟ್ಟಿ, ಗಿರಿಧರ್ ಆಚಾರ್ಯ, ಟಿಜಿ ಹೆಗ್ಡೆ, ವಿಜಯಲಕ್ಷ್ಮೀ, ಮಂಜುನಾಥ ಮಣಿಪಾಲ, ನಗರಸಭೆ ಪೌರಾಯುಕ್ತ ರಾಯಪ್ಪ, ಇಂಜಿನಿಯರ್ ಯಶವಂತ ಪ್ರಭು, ವಾರಾಹಿ ಯೋಜನೆಯ ಅಧಿಕಾರಿಗಳಾದ ಮಂಜುನಾಥಯ್ಯ, ಅರ್ಕೇಶ್ ಮೊದಲಾದವರು ಉಪಸ್ಥಿತರಿದ್ದರು.