ಮಂಗಳೂರು, ಏ.23: ಥಲಸ್ಸೆಮಿಯಾ ಒಂದು ಆನುವಂಶಿಕ ರಕ್ತದ ಕಾಯಿಲೆಯಾಗಿದ್ದು, ರೋಗಿಗಳಿಗೆ ಜೀವಿತಾವಧಿಯಲ್ಲಿ ಪ್ರತಿ 3 ರಿಂದ 4 ವಾರಗಳಿಗೊಮ್ಮೆ ರಕ್ತ ವರ್ಗಾವಣೆಯ ಅಗತ್ಯವಿರುತ್ತದೆ. ಈ ಸ್ಥಿತಿಯನ್ನು ಗುಣಪಡಿಸುವ ಏಕೈಕ ಚಿಕಿತ್ಸಾ ಆಯ್ಕೆಯೆಂದರೆ ಸರಿಯಾದ ಸಮಯದಲ್ಲಿ ಮಾಡುವ ಮೂಳೆ ಮಜ್ಜೆಯ ಕಸಿ. ಈ ಪ್ರದೇಶದ ಮಕ್ಕಳಿಗೆ ಅನುಕೂಲವಾಗಲು ಮತ್ತು ಇದರ ಪ್ರಯೋಜನ ನೀಡಲು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗ, ಗುಡ್ ಸ್ಟೆಪ್ ಸಂಸ್ಥೆಯೊಂದಿಗೆ ಎಚ್‌ಎಲ್‌ಎ ಪರೀಕ್ಷಾ ಶಿಬಿರವನ್ನು ಆಯೋಜಿಸಿತ್ತು . ಶಿಬಿರದಲ್ಲಿ 20 ಕುಟುಂಬಗಳು ಭಾಗವಹಿಸಿದ್ದರು ಮತ್ತು ರೋಗಿಗಳು ಮತ್ತು ಸಂಭಾವ್ಯ ದಾನಿಗಳ 50 ಕ್ಕೂ ಹೆಚ್ಚು ಎಚ್‌ಎಲ್‌ಎ ಮಾದರಿಗಳನ್ನು ಸಂಗ್ರಹಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಜಿಲ್ಲಾ ವೈದ್ಯಾಧಿಕಾರಿ ಡಾ.ಜೆಸಿಂತಾ ಡಿಸೋಜ ಆಗಮಿಸಿ ಮಾತನಾಡಿ, ಥಲಸ್ಸೇಮಿಯಾ ರೋಗದಿಂದ ಕುಟುಂಬಗಳ ಮೇಲೆ ಗಣನೀಯ ಆರ್ಥಿಕ ಹೊರೆಯಾಗುತ್ತಿದ್ದು, ಇದನ್ನು ತಡೆಗಟ್ಟಿ ಗುಣಪಡಿಸಲು ಸರ್ಕಾರ ಸಂಕಲ್ಪ ಮಾಡಿದೆ ಎಂದರು. ಇಮ್ಯುನೊಹೆಮಟಾಲಜಿ ಮತ್ತು ರಕ್ತ ವರ್ಗಾವಣೆ ವಿಭಾಗದ ಹಿರಿಯ ಸಲಹೆಗಾರರು ಮತ್ತು ಮುಖ್ಯಸ್ಥರಾದ ಡಾ. ಶರತ್ ಕುಮಾರ್ ರಾವ್ ಅವರು ಮಾತನಾಡುತ್ತಾ,ಥಲಸ್ಸೆಮಿಯಾ ಮತ್ತು ಅದರ ತಡೆಗಟ್ಟುವಿಕೆಗಾಗಿ ತಪಾಸಣೆಯ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು. ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಥಲಸೇಮಿಯಾ ಡೇ ಕೇರ್ ಸೆಂಟರ್‌ನಲ್ಲಿ ಸರ್ಕಾರಿ ಎನ್‌ಎಚ್‌ಎಂ ಕಾರ್ಯಕ್ರಮದ ಮೂಲಕ ರೋಗಿಗಳು ರಕ್ತವನ್ನು ಪಡೆಯುವದಲ್ಲದೆ ಚೆಲೇಶನ್ ಚಿಕಿತ್ಸೆ, ಟ್ರಿಪಲ್ ಸಲೈನ್ ವಾಶ್ಆಗಿರುವ ರಕ್ತ ಮತ್ತು ಅಗತ್ಯವಿದ್ದರೆ ಲ್ಯುಕೋಫಿಲ್ಟರ್‌ಗಳು ಮತ್ತು ಪ್ರತಿಕಾಯಗಳಿಗೆ ರಕ್ತದ ಟೈಪಿಂಗ್ ಅನ್ನು ಉಚಿತವಾಗಿ ಮಾಡಲಾಗುವುದು ಎಂದು ಅವರು ಹೇಳಿದರು.
ಮೂಳೆ ಮಜ್ಜೆಯ ಕಸಿ ಮಾಡಲು ಸಂಭಾವ್ಯ ದಾನಿಗಳನ್ನು ಗುರುತಿಸುವ ಭಾಗವಾಗಿ ಮೊದಲ ಹಂತದಲ್ಲಿ ಎಚ್‌ಎಲ್‌ಎ ಟೈಪಿಂಗ್ ಮಾಡುತ್ತಿದ್ದೇವೆ ಎಂದು ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಅರ್ಚನಾ ಎಂ.ವಿ ಹೇಳಿದರು. ವಿಭಾಗದ ಹಿರಿಯ ಸ್ಥಾನಿಕ ವೈದ್ಯೆ ಡಾ.ಸ್ವಾತಿ ಪಿ.ಎಂ ಅವರು ಥಲಸ್ಸೇಮಿಯಾ ಮತ್ತು ಕಬ್ಬಿಣದ ಚೆಲೇಷನ್‌ನ ಅಗತ್ಯತೆಯ ಕುರಿತು ಅವಲೋಕನವನ್ನು ನೀಡಿದರು. ಅಸ್ಥಿಮಜ್ಜೆ ಕಸಿ ಮಾಡಲು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ರೋಗಿಗಳು ಪಡೆಯಬಹುದಾದ ಆರ್ಥಿಕ ಸಹಾಯದ ಕುರಿತು ಪ್ರಾಧ್ಯಾಪಕ ಮತ್ತು ವಿಭಾಗದ ಮುಖ್ಯಸ್ಥ ಡಾ. ವಾಸುದೇವ ಭಟ್ ಕೆ ಮಾಹಿತಿ ನೀಡಿದರು.