ಕೋಟ, ಏ.21: ಮಣೂರು ಶ್ರೀ ಮಹಾಲಿಂಗೇಶ್ವರ ದೇಗುಲ ಕಾರಣಿಕ ಕ್ಷೇತ್ರವಾಗಿದೆ ಎಂದು ಯಕ್ಷ ಗುರು ಎಂ.ಎನ್ ಮಧ್ಯಸ್ಥ ಹೇಳಿದರು. ಕೋಟದ ಮಣೂರು ಶ್ರೀ ಹೇರಂಬ ಮಹಾಗಣಪತಿ ಮಹಾಲಿಂಗೇಶ್ವರ ದೇಗುಲದ ವಾರ್ಷಿಕ ಜಾತ್ರಾ ಸಡಗರ ಸಾಂಸ್ಕೃತಿಕ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಕಷ್ಟ ಪರಿಹರಿಸುವ ಹರನಾಗಿ ಭಕ್ತರನ್ನು ಸಲಹುತ್ತಿದ್ದಾನೆ. ಈ ದೇವಳ ಉಡುಪಿ ಜಿಲ್ಲೆಯ ಅಭಿವೃದ್ಧಿ ಹೊಂದಿದ ದೇಗುಲಗಳ ಸಾಲಿಗೆ ನಿಂತಿದೆ. ವರ್ಷದಿಂದ ವರ್ಷಕ್ಕೆ ದೇಗುಲದಲ್ಲಿ ಭಕ್ತರ ಸಂಖ್ಯೆ ಏರುಗತಿಯನ್ನು ಕಾಣುತ್ತಿದೆ, ಅಲ್ಲದೆ ಜಾತ್ರೆಗೆ ಹೊಸ ಮೆರುಗು ಹೆಚ್ಚುತ್ತಿದೆ. ಯಾವುದೇ ಕ್ಷೇತ್ರ ಅಭಿವೃದ್ಧಿಗೊಳ್ಳಬೇಕಾದರೆ ಅಲ್ಲಿನ ಆಡಳಿತ ಮಂಡಳಿಯ ಕಾರ್ಯವೈಖರಿ ಪ್ರಮುಖವಾಗಿದೆ. ಸತೀಶ್ ಕುಂದರ್ ಮತ್ತವರ ತಂಡದ ನೇತೃತ್ವದಲ್ಲಿ ದೇಗುಲ ಉನ್ನತಿ ಕಾಣುತ್ತಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಉದ್ಘಾಟಿಸಿದರು. ಇದೇ ವೇಳೆ ಯಕ್ಷಗುರು ಸೀತಾರಾಮ ಶೆಟ್ಟಿ ಕೊಯ್ಕೂರು ಇವರನ್ನು ಸನ್ಮಾನಿಸಲಾಯಿತು. ಮುಖ್ಯ ಅಭ್ಯಾಗತರಾಗಿ ಭಾರತೀಯ ದೂರಸಂಪರ್ಕ ಕೇಂದ್ರ ಇದರ ನಿವೃತ್ತ ಅಧಿಕಾರಿ ವಿಷ್ಣುಮೂರ್ತಿ ಮಯ್ಯ, ದೇಗುಲದ ಮಾಜಿ ಸದಸ್ಯ ರಮೇಶ್ ಪಡಿಯಾರ್, ಜೀರ್ಣೋದ್ಧಾರ ಸಮಿತಿಯ ಅರುಣಾಚಲ ಮಯ್ಯ, ರಾಜೇಂದ್ರ ಉರಾಳ, ವಿಜಯ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕಿ ನಾಗರತ್ನ ಹೇರ್ಳೆ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಛಾಯಾ ತರಂಗಿಣಿ ಸಂಗೀತ ಶಾಲೆ ಹರ್ತಟ್ಟು ಇವರಿಂದ ಶಾಸ್ತ್ರೀಯ ಸಂಗೀತ ನೃತ್ಯ ವೈಭವ, ಸ್ನೇಹಕೂಟ ಮಣೂರು ಇವರಿಂದ ಸಾಂಸ್ಕೃತಿಕ ಸಿಂಚನ, ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಮಣೂರು ಇವರಿಂದ ಯಕ್ಷಗಾನ ಪ್ರದರ್ಶನಗೊಂಡಿತು.