ಬ್ರಹ್ಮಾವರ, ಏ.20: ಬಾರಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗ ಮತ್ತು ನಿರ್ವಹಣಾಶಾಸ್ತ್ರ ವಿಭಾಗದ ಜಂಟಿ ಆಶ್ರಯದಲ್ಲಿ ಉದ್ಯಮಶೀಲತಾ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಲ್ಲಿ ವ್ಯವಹಾರ ಕೌಶಲ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ವಾಣಿಜ್ಯ ಮೇಳವನ್ನು ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಬೆಣ್ಣೆಕುದ್ರುವಿನ ಉದ್ಯಮಿ ಸತೀಶ್ ಪೂಜಾರಿ ಉದ್ಯಮ ನಡೆಸುವ ಪರಿ, ಉದ್ಯಮಿಗೆ ಇರಬೇಕಾದ ತಾಳ್ಮೆ, ಶ್ರದ್ಧೆ, ಸಾಮಾಜಿಕ ಮತ್ತು ಪರಿಸರ ಕಾಳಜಿಯ ಕುರಿತು ಮಾತನಾಡಿದರು. ಯಾವುದೇ ಉದ್ಯಮವಾದರೂ ಅದರ ಕುರಿತು ಜ್ಞಾನವನ್ನು ಸಂಗ್ರಹಿಸಲು ಆಳವಾಗಿ ಅಧ್ಯಯನ ನಡೆಸುವ ಅವಶ್ಯಕತೆಯನ್ನು ವಿದ್ಯಾರ್ಥಿಗಳಿಗೆ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಮೇಶ ಆಚಾರ್ ಅವರು ಮಾತನಾಡಿ, ವ್ಯವಹಾರದಲ್ಲಿ ಸಮಾಜ ಹಿತವನ್ನು ಮರೆಯಬಾರದು ಎಂದರು. ನಿರ್ವಹಣಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸುದಿನ ಟಿ.ಏ ದೇಶದ ಅಭಿವೃದ್ಧಿಯಲ್ಲಿ ಉದ್ಯೋಗಿಗಳಿಗಿಂತ ಉದ್ಯಮಿಗಳ ಪಾಲು ದೊಡ್ಡದು ಎನ್ನುತ್ತಾ ಉದ್ಯಮಿಯಾಗಿ ಸಮಾಜವನ್ನು ಮರೆಯದ ಸತೀಶ್ ಪೂಜಾರಿಯವರ ಸಾಮಾಜಿಕ ಮತ್ತು ಪರಿಸರ ಕಾಳಜಿಯನ್ನು ಶ್ಲಾಘಿಸಿದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶೋಭಾ, ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರುತಿ ಆಚಾರ್ಯ, ರಾಧಾಕೃಷ್ಣ, ವಿದ್ಯಾರ್ಥಿ ಪ್ರತಿನಿಧಿಗಳಾದ ತೃತೀಯ ಬಿಬಿಎ ವಿದ್ಯಾರ್ಥಿ ಚೇತನ್ ಮತ್ತು ತೃತೀಯ ಬಿಕಾಂ ವಿದ್ಯಾರ್ಥಿನಿ ನಂದಿಲಾ ಉಪಸ್ಥಿತರಿದ್ದರು. ಎಂಕಾಂ ನ ಮಾನಸ ಪ್ರಾರ್ಥಿಸಿದರು. ಉಪನ್ಯಾಸಕಿ ಶೋಭ ಸ್ವಾಗತಿಸಿ, ನಾಗರಾಜ್ ವಂದಿಸಿದರು. ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು.