ಕೋಟ, ಏ.2: ಇಲ್ಲಿನ ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪ್ರದೇಶದಲ್ಲಿ ಎಕರೆಗಟ್ಟಲೆ ಕೃಷಿ ಭೂಮಿ ಹಾಗೂ ಉಪ್ಪು ನೀರಿನ ಹೊಳೆ ಭಾಗದಲ್ಲಿರುವ ಸಾಕಷ್ಟು ಮರಗಿಡಗಳು ಬೆಂಕಿಗಾಹುತಿಯಾಗಿವೆ. ಮಂಗಳವಾರ ಅಪರಾಹ್ನ ಸುಮಾರು ಮೂರು ಗಂಟೆ ಸುಮಾರಿಗೆ ಕೋಟತಟ್ಟು ಪಡುಕರೆ ರಾಮ ಮಂದಿರ ಸಮೀಪದ ಕೃಷಿಭೂಮಿಗೆ ಬೆಂಕಿ ಇರಿಸಿದ ಪರಿಣಾಮ ಹೊತ್ತಿ ಉರಿದ ಬೆಂಕಿ ಕೋಟತಟ್ಟು ಐಸೆಂಟ್ಸ್ ಭಾಗದವರೆಗೆ ಆಕ್ರಮಿಸಿಕೊಂಡು ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಕೃಷಿ ಭೂಮಿಯವರೆಗೆ ಕ್ರಮಿಸಿಕೊಂಡಿತು. ಸ್ಥಳೀಯ ಕೋಟತಟ್ಟು ಗ್ರಾಮ ಪಂಚಾಯತ್ ಪಡುಕರೆ ಭಾಗದ ಸದಸ್ಯ ರವೀಂದ್ರ ತಿಂಗಳಾಯ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಸ್ಥಳಕ್ಕೆ ದೌಡಾಯಿಸುವುದರೊಳಗೆ ಸ್ಥಳೀಯರೆ ನೆಂದಿಸುವ ಕಾರ್ಯಕ್ಕೆ ಕೈಹಾಕಿದರು. ಇದರಿಂದ ಸುತ್ತಮುತ್ತಲಿನ ಸ್ಥಳೀಯ ಮನೆಗಳು ಹಾನಿಯಿಂದ ಪಾರಾಗಿವೆ.
ದೌಡಾಯಿಸಿದ ಅಗ್ನಿಶಾಮಕದಳ: ಸ್ಥಳಕ್ಕೆ ಕುಂದಾಪುರದ ಅಗ್ನಿ ಶಾಮಕದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇದಕ್ಕಿಂತ ಮೊದಲೆ ಗ್ರಾಮಸ್ಥರು ಸೀತಾನದಿಯ ನೀರನ್ನು ಪಾತ್ರೆಗಳ ಸಹಕಾರದೊಂದಿಗೆ ಬೆಂಕಿ ನಂದಿಸಲು ಮುಂದಾದರು.ಇದರಿಂದ ಭಾರಿ ಅನಾಹುತವೊಂದು ಕೈತಪ್ಪಿದಂತಾಗಿದೆ. ಸತತ ಮೂರು ವರ್ಷಗಳಿಂದ ಈ ರೀತಿಯ ಪ್ರಕರಣಗಳು ನಡೆಯುತ್ತಿರುವುದರ ಬಗ್ಗೆ ಸ್ಥಳೀಯರು ಬೇಸರ ಹೊರಹಾಕಿದ್ದಾರೆ ಅಲ್ಲದೆ ಅಗ್ನಿಶಾಮಕ ದಳದವರಲ್ಲಿ ತಮ್ಮ ನೋವನ್ನು ವ್ಯಕ್ತಪಡಿಸಿದರು. ಇದೇ ವೇಳೆ ಅಗ್ನಿಶಾಮಕದಳದ ಅಧಿಕಾರಿ ಹಾಗೂ ಸಿಬ್ಬಂದಿಗಳು ಎಕರೆಗಟ್ಟಲೆ ಕೃಷಿ ಭೂಮಿ ಬೆಂಕಿಗಾಹುತಿಯನ್ನು ಪರಿಶೀಲಿಸಿದರಲ್ಲದೆ ಬೆಂಕಿಗಾಹುತಿ ಪಡೆದ ಪ್ರಾಣಿ ಪಕ್ಷಿಗಳನ್ನು ಸಂರಕ್ಷಿಸಿದರು.