ಕೋಟ, ಏ.2: ಕಲಾ ಮಾಧ್ಯಮಗಳಿಗೆ ಭಾಷೆ, ದೇಶ, ಧರ್ಮಗಳ ಎಲ್ಲೆಯನ್ನು ಮೀರಿ ಜಗದ ಜನರ ಮನಸ್ಸುಗಳನ್ನು ಬೆಸೆಯುವ ವಿಶಿಷ್ಟ ಗುಣವಿದೆ. ಅದರಲ್ಲಿಯೂ ಯಕ್ಷಗಾನ ತನ್ನ ಅನನ್ಯತೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಯಕ್ಷಗಾನದ ನೇಪಥ್ಯ ಸಹಾಯಕರನ್ನೂ ಒಳಗೊಂಡು ಸರ್ವ ಕಲಾವಿದರ ಸಂಘಟಕರ ಪರಿಶ್ರಮ ಸಾರ್ಥಕವಾಗಬೇಕಾದರೆ ರಾಜ್ಯ ಕಲೆಯಾಗಿ ಮಾನ್ಯತೆ ಪಡೆಯಬೇಕು ಎಂದು ಯಕ್ಷಗಾನ ಚಿಂತಕ ವಿಮರ್ಶಕ ಹೆಚ್. ಸುಜಯೀಂದ್ರ ಹಂದೆ ಹೇಳಿದರು.
ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಆಯೋಜಿಸಿದ ತೆಕ್ಕಟ್ಟೆ ಕೊಮೆಯ ಯಶಸ್ವಿ ಕಲಾವೃಂದದ ಬೆಳ್ಳಿ ಹಬ್ಬ ಶ್ವೇತಯಾನ ಶ್ವೇತ ಸಂಜೆ-13 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ತೆಕ್ಕಟ್ಟೆ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಯಕ್ಷಾಂಗಣ ಟ್ರಸ್ಟ್ನ ಸಂಚಾಲಕ ಸುದರ್ಶನ ಉರಾಳ, ಯಶಸ್ವಿ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ, ಕಾರ್ಯದರ್ಶಿ ವೆಂಕಟೇಶ ವೈದ್ಯ, ಬೆಳ್ಳಿ ಹಬ್ಬ ಸಮಿತಿಯ ಉಪಾಧ್ಯಕ್ಷ ಗಣಪತಿ ಶ್ರೀಯಾನ್, ಪ್ರಧಾನ ಕಾರ್ಯದರ್ಶಿ ಹೆರಿಯ ಮಾಸ್ಟರ್ ಉಪಸ್ಥಿತರಿದ್ದರು. ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ, ಸುದೀಪ ಉರಾಳ, ದಿನೇಶ್ ಕನ್ನಾರ್, ಸ್ಪೂರ್ತಿ ಭಟ್, ಸತೀಶ್ ಹಾಲಾಡಿ, ರಾಜೇಶ್ ಬೈಕಾಡಿ, ರಾಘವೇಂದ್ರ ತುಂಗ, ಪ್ರಶಾಂತ್ ಆಚಾರ್, ರಾಜು ಪೂಜಾರಿ ಇನ್ನಿತರರನ್ನು ಒಳಗೊಂಡ ‘ಕೃಷ್ಣಲೀಲೆ’ ಯಕ್ಷಗಾನ ಪ್ರದರ್ಶನಗೊಂಡಿತು.