ಕುಂದಾಪುರ, ಮಾ.30: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಯುವ ರೆಡ್‌ಕ್ರಾಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಜಲ ಜಾಗೃತಿ ಅಭಿಯಾನದ ಅಂಗವಾಗಿ ‘ಜಲ ಜಾಗೃತಿ ತೇರು’ ಕಾರ್ಯಕ್ರಮ ಜರಗಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿಯವರು ಜಲ ಜಾಗೃತಿ ರಥವನ್ನು ಸಾಂಕೇತಿಕವಾಗಿ ಎಳೆಯುವ ಮೂಲಕ ಉದ್ಘಾಟಿಸಿ, ಸಮಸ್ತ ಜೀವ ಜಗತ್ತಿನ ಜೀವಾಮೃತ ನೀರು. ಕ್ಲಪ್ತ ಸಮಯದಲ್ಲಿ ನೀರಿನ ಸಂರಕ್ಷಣೆಯ ಬಗ್ಗೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಭವಿಷ್ಯದಲ್ಲಿ ಸಂಭವಿಸುವ ಜಲಕುಸಿತಕ್ಕೆ ನಾವೇ ಹೊಣೆಯಾಗಲಿದ್ದೇವೆ. ನೀರಿನ ಸದ್ಬಳಕೆಯ ಕುರಿತು ಜಾಗೃತಿ ಮೂಡಿಸಬೇಕಾಗಿರುವುದು ವರ್ತಮಾನದ ತುರ್ತು. ಇದೇ ಸಂದರ್ಭ ನೀರಿನ ಮಹತ್ವ ಹಾಗೂ ಅದರ ಸದುಪಯೋಗದ ಬಗ್ಗೆ ವಿದ್ಯಾರ್ಥಿಗಳು ಜಾಗೃತಿ ವಹಿಸಬೇಕು ಎಂದರು. ಉಪಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಶುಭ ಹಾರೈಸಿದರು. ಜಲ ಜಾಗೃತಿ ಅಭಿಯಾನದ ಸಂಯೋಜಕರಾದ ಶರತ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ವೀಣಾ ವಿ. ಭಟ್ ಕಾರ್ಯಕ್ರಮದ ಕುರಿತು ಆಶಯ ನುಡಿಗಳನ್ನಾಡಿದರು. ಯುವ ರೆಡ್‌ಕ್ರಾಸ್ ಘಟಕದ ಸಂಯೋಜಕರಾದ ಯೋಗೀಶ್ ಶ್ಯಾನುಭೋಗ ಸ್ವಾಗತಿಸಿ, ನಿರೂಪಿಸಿದರು.
ಸಹ ಸಂಯೋಜಕಿಯಾದ ಮಾಲತಿ ವಂದಿಸಿದರು. ಅಭಿಯಾನದ ಮುಖ್ಯ ಪ್ರಚಾರಕರಾದ ಕೀರ್ತನ ತೃತೀಯ ಬಿ.ಸಿ.ಎ., ಸುಪ್ರಜ್ ದ್ವಿತೀಯ ಬಿ.ಕಾಂ. (ಬಿ), ಸೌಭಾಗ್ಯ ಕಿಣಿ ತೃತೀಯ ಬಿ.ಕಾಂ. (ಬಿ) ಹಾಗೂ ಸುಜಯ್ ಶೆಟ್ಟಿ ಪ್ರಥಮ ಬಿ.ಕಾಂ. (ಇ), ವಿಭಾಗದ ವಿದ್ಯಾರ್ಥಿಗಳು ಕಾಲೇಜಿನ ಎಲ್ಲಾ ತರಗತಿಗಳಿಗೆ ಜಲ ಜಾಗೃತಿ ತೇರಿನ ಮೂಲಕ ತೆರಳಿ ಜಲ ಜಾಗೃತಿಯ ಅರಿವನ್ನು ಮೂಡಿಸಿದರು. ಇದೇ ಸಂದರ್ಭದಲ್ಲಿ ಜಲ ಜಾಗೃತಿ ತೇರಿನ ತಯಾರಿಯ ಹಿಂದೆ ಶ್ರಮಿಸಿದ ವಿದ್ಯಾರ್ಥಿಗಳಾದ ತೃತೀಯ ಬಿ.ಕಾಂ. (ಬಿ) ಮನೀಷ್, ತೃತೀಯ ಬಿಬಿಎ ಸ್ವಸ್ತಿಕ್, ದ್ವಿತೀಯ ಬಿ.ಕಾಂ. (ಡಿ) ಮದನ್, ದ್ವಿತೀಯ ಬಿ.ಕಾಂ. (ಎ) ಯಶ್ವಂತ್ ಹಾಗೂ ನಿತಿನ್ ಇವರನ್ನು ಗುರುತಿಸಲಾಯಿತು.