ಸಾಣೂರು, ಮಾ.16: ಕಾರ್ಕಳ ತಾಲೂಕಿನ ಸಾಣೂರು ಮುದ್ದಣನಗರ ನಡ್ಯೋಡಿಬೆಟ್ಟದ ಕ್ಷೇತ್ರ ಧರ್ಮರಸು ಕೊಡಮಣಿತ್ತಾಯಿ ಕುಕ್ಕಿನಂತಾಯ ದೈವಸ್ಥಾನ ಮತ್ತು ಬ್ರಹ್ಮಬೈದರ್ಕಳ ಗರಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಧರ್ಮರಸು ಉಲ್ಲಾಯನ ಮಾಡ ಹಾಗೂ ಜೀರ್ಣೋದ್ಧಾರಗೊಂಡ ಗರ್ಭಗುಡಿಗಳಲ್ಲಿ ಕ್ಷೇತ್ರದ ಧರ್ಮದೈವಗಳ ಪುನರ್ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ, ಧಾರ್ಮಿಕ ಸಮಾರಂಭ ಹಾಗೂ ವಾರ್ಷಿಕ ನೇಮೋತ್ಸವಗಳು ಮಾರ್ಚ್ 23 ರಿಂದ 31ರವರೆಗೆ ನಡೆಯಲಿದ್ದು ಗರಡಿಯ ಆವರಣದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಶ್ರೀರಾಮ ಭಟ್ ಅವರು ಮಾತನಾಡಿ, ದೈವ ಸಂಕಲ್ಪ ಭಕ್ತರ ಸಂಕಲ್ಪ ಒಂದಾದಾಗ ಯಶಸ್ಸು ಸಾಧ್ಯವಾಗುತ್ತದೆ. ಈ ಗ್ರಾಮದ ಪ್ರತಿ ಮನೆ ಮನೆಗೆ ಆಮಂತ್ರಣ ಪತ್ರಿಕೆ ತಲುಪಬೇಕು. ಯಾವೊಂದು ಗೊಂದಲವಿಲ್ಲದೇ ಸಕಲ ಕಾರ್ಯಗಳು ನಡೆಯಬೇಕು. ಎಲ್ಲರ ಮನ:ಪೂರ್ವಕ ಭಾಗವಹಿಸುವಿಕೆಯಿಂದ ಎಲ್ಲ ಯೋಜಿತ ಕಾರ್ಯಗಳು ನೆರವೇರಲಿವೆ ಎಂದರು.
ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಕೋಟ್ಯಾನ್ ಅವರು ಮಾತನಾಡಿ ಮಾರ್ಚ್ 20 ರಂದು ಗ್ರಾಮಸ್ಥರ ಸಹಕಾರದಲ್ಲಿ ಗರಡಿಗೆ ಸಂಪರ್ಕಿಸುವ ಗ್ರಾಮದ ಎಲ್ಲ ರಸ್ತೆಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಸಲಾಗುವುದು ಎಂದರು. ಮಾರ್ಚ್ 23 ರಂದು ಹಸಿರು ಹೊರೆಕಾಣಿಕೆ, ಮಾರ್ಚ್ 27 ರಂದು ಪುನರ್ ಪ್ರತಿಷ್ಠೆ, ಮಾರ್ಚ್ 28 ರಂದು ಬ್ರಹ್ಮಕಲಶಾಭಿಷೇಕ, 29ರಂದು ವಾರ್ಷಿಕ ನೇಮೋತ್ಸವ ನಡೆಯಲಿದೆ ಎಂದರು.
ಸಾಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಯುವರಾಜ್ ಜೈನ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಭಾತ್ ನಾಯ್ಕ್ , ಕೋಶಾಧಿಕಾರಿ ಎಂ. ದಯಾನಂದ ಶೆಟ್ಟಿ, ವಿಶಾಲ್ ಪೂಜಾರಿ ಖಂಡಿಗಬರ್ಕೆ, ಸುಂದರ್ ಶೆಟ್ಟಿ ಧರ್ಮಡ್ಕ ಗುತ್ತು ಬರ್ಕೆಗಳ ಪ್ರಮುಖರು ವಿವಿಧ ಸಮಿತಿಗಳ ಸಂಚಾಲಕರು, ಸಹ ಸಂಚಾಲಕರು ಪದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು. ಪ್ರಚಾರ ಮತ್ತು ಮಾಧ್ಯಮ ಸಮಿತಿ ಸಂಚಾಲಕ ಮೋಹನ್ ಶೆಟ್ಟಿ ಸಾಣೂರು ಕಾರ್ಯಕ್ರಮ ನಿರೂಪಿಸಿದರು.