ಉಡುಪಿ: ರಾಜ್ಯದಲ್ಲಿ ಒಂದು ವರ್ಷಕ್ಕಿಂತ ಅಧಿಕ ದಿನಗಳಿಂದ ತೆರಿಗೆ ಪಾವತಿಸದೇ ಹೊರರಾಜ್ಯದ ವಾಹನಗಳು ಓಡಾಡುತ್ತಿರುವುದು ಕಂಡುಬಂದಿದ್ದು, ಹೊರ ರಾಜ್ಯದ ಮೋಟಾರು ವಾಹನ ಮಾಲೀಕರು ಈ ಪ್ರಕಟಣೆಯ ಒಂದು ವಾರದ ಒಳಗೆ ತಮ್ಮ ವಾಹನಗಳಿಗೆ ರಾಜ್ಯದ ತೆರಿಗೆ ಪಾವತಿಸಲು ಕ್ರಮ ಕೈಗೊಳ್ಳುವಂತೆ ಪಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ ಸೂಚನೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಹೊರರಾಜ್ಯದ ವಾಹನಗಳು ತೆರಿಗೆ ಪಾವತಿಸದೇ ಜಿಲ್ಲೆಯಲ್ಲಿ ಸಂಚರಿಸುತ್ತಿರುವುದು ಕಂಡುಬಂದಲ್ಲಿ ತಪಾಸಣೆ ವೇಳೆ ವಾಹನವನ್ನು ಮುಟ್ಟುಗೋಲು ಹಾಕಲಾಗುವುದು.
ಹೊರರಾಜ್ಯದ ವಾಹನಗಳಿಗೆ ಬಿ.ಹೆಚ್ ಸೀರಿಸ್ ಸಂಖ್ಯೆಯನ್ನು ಪಡೆಯಲು ಇಚ್ಛಿಸುವ ಕೇಂದ್ರ ಸರ್ಕಾರಿ ನೌಕರರು, ತಮ್ಮ ಹೊಸ ವಾಹನದ ನೋಂದಣಿಯ ಸಮಯದಲ್ಲಿ ವಿಳಾಸ ಪುರಾವೆ, ತತ್ಸಂಬಂಧ ಉದ್ಯೋಗ ಖಾತರಿ ಪತ್ರದ ಪ್ರತಿ, ಸಂಬಂಧಪಟ್ಟ ಇಲಾಖೆಯ ಸೇವಾ ಗುರುತಿನ ಚೀಟಿ, ಮೇಲಾಧಿಕಾರಿಗಳ ಪ್ರಮಾಣ ಪತ್ರ ಹಾಗೂ ರಹವಾಸಿ ಪ್ರಮಾಣ ಪತ್ರ ಹಾಜರುಪಡಿಸಿ, ಏಕರೂಪದ ತೆರಿಗೆಯನ್ನು ಪಾವತಿಸಲು ಅವಕಾಶವಿರುತ್ತದೆ.
ಹೊರರಾಜ್ಯದ ವಾಹನಗಳು ರಾಜ್ಯಕ್ಕೆ ವಲಸೆ ಬಂದಾಗ ಇನ್‌ವಾಯ್ಸ್ ಅಥವಾ ವಾಹನ ಖರೀದಿ ಪುರಾವೆ, ನಮೂನೆ 27-2 ಅರ್ಜಿ, ಆಕ್ಷೇಪಣಾ ರಹಿತ ಪತ್ರ, ಸ್ಮಾರ್ಟ್ ಕಾರ್ಡ್ ಅಥವಾ ನೋಂದಣಿ ಪತ್ರ, ವಿಮಾ ಪತ್ರ, ವಾಯುಮಾಲಿನ್ಯ ತಪಾಸಣಾ ಪತ್ರ, ಆಧಾರ/ ವಿಳಾಸ ಪುರಾವೆ ಹಾಗೂ ಭಾವಚಿತ್ರವನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.
ಹೊರರಾಜ್ಯದ ವಾಹನ ಮಾಲೀಕರು ರಾಜ್ಯಕ್ಕೆ ವಲಸೆ ಬಂದಲ್ಲಿ ಕೂಡಲೇ ರಾಜ್ಯದ ತೆರಿಗೆಯನ್ನು ಪಾವತಿಸಬೇಕು. ಇಲ್ಲವಾದಲ್ಲಿ ವಾಹನ ಮುಟ್ಟುಗೋಲು ಹಾಕಿ ತೆರಿಗೆ ಹಾಗೂ ದಂಡ ವಿಧಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.