ಉಡುಪಿ, ಮಾ.7: ಸ್ವ-ಸಹಾಯ ಸಂಘಗಳು ತಾವು ಉತ್ಪಾದಿಸುವ ಉತ್ಪನ್ನಗಳು ಗುಣಮಟ್ಟದೊಂದಿಗೆ ಇದ್ದಾಗ ಮಾತ್ರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಉಂಟಾಗುವುದರೊಂದಿಗೆ ಹೆಚ್ಚಿನ ಆರ್ಥಿಕ ಲಾಭ ಗಳಿಸಲು ಸಾಧ್ಯ. ಇದಕ್ಕೆ ಒತ್ತು ನೀಡಬೇಕೆಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ಗುರುವಾರ ನಗರದ ಮಲ್ಪೆ ಬೀಚ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ- ಸಂಜೀವಿನಿ ಉಡುಪಿ ಜಿಲ್ಲೆ ಇವರ ವತಿಯಿಂದ ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಸಲುವಾಗಿ ನಡೆದ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಸರಕಾರ ಹೆಣ್ಣುಮಕ್ಕಳು ಸ್ವ-ಉದ್ಯೋಗ ಕೈಗೊಂಡು ಆರ್ಥೀಕವಾಗಿ ಸಬಲರಾಗುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಹೆಣ್ಣುಮಕ್ಕಳು ಇದರ ಉಪಯೋಗ ಪಡೆದುಕೊಂಡು ಆರ್ಥೀಕರಾಗಿ ಸಬಲರಾಗಿ ಸ್ವಾವಲಂಭಿಗಳಾಗಬೇಕು ಎಂದರು. ಸ್ವ-ಸಹಾಯ ಸಂಘಗಳು ಉತ್ಪಾದಿಸುವ ಉತ್ಪನ್ನಗಳು ಮಾರುಕಟ್ಟೆ ಮಾಡುವುದೇ ಒಂದು ಸವಾಲಾಗಿರುತ್ತದೆ. ಅದನ್ನು ಎದುರಿಸಲು ತಾವು ಉತ್ಪಾದಿಸುವ ಉತ್ಪನ್ನಗಳೂ ಸ್ವಚ್ಛವಾಗಿ ಹಾಗೂ ಗುಣಮಟ್ಟದೊಂದಿಗೆ ಇದ್ದಲ್ಲಿ ಜನರು ಮಾರುಕಟ್ಟೆಯಲ್ಲಿ ಅದನ್ನು ಕೇಳಿ ಪಡೆಯುತ್ತಾರೆ. ಉತ್ಪನ್ನಗಳು ಚೆನ್ನಾಗಿದ್ದಲ್ಲಿ ಆನ್‌ಲೈನ್ ಮೂಲಕ ಗ್ರಾಹಕರು ಖರೀದಿಸಲು ಮುಂದಾಗುತ್ತಾರೆ. 300 ಕ್ಕೂ ಹೆಚ್ಚು ಸ್ವ-ಸಹಾಯ ಸಂಘದ ಸದಸ್ಯರನ್ನು ಒಳಗೊಂಡಿರುವ ಸ್ವ -ಸಹಾಯ ಸಂಘದ ಉತ್ಪನ್ನಗಳಾದ ಜೀನಿ ಹಾಗೂ ದೇಸಿ ಎಂಬ ಹೆಸರಿನ ಆಹಾರ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಕೋಟಿಗಟ್ಟಲೆ ವಹಿವಾಟು ನಡೆಸುತ್ತಿದೆ. ಅಲ್ಲದೇ ಆನ್‌ಲೈನ್ ಮೂಲಕವೂ ಸಹ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ ಎಂದ ಅವರು, ಸ್ವ-ಸಹಾಯ ಸಂಘಗಳು ಪ್ರಾರಂಭಿಕ ಹಂತದಲ್ಲಿ ಮುತುವರ್ಜಿ ವಹಿಸಿ ಉತ್ಪನ್ನಗಳು ಉತ್ಪಾದಿಸಿ, ಮಾರಾಟ ಮಾಡಿದ್ದಲ್ಲಿ ಮಾರುಕಟ್ಟೆಯಲ್ಲಿ ಯಶಸ್ಸುಗೊಳಿಸಲು ಸಾಧ್ಯ ಎಂದರು. ಮಹಿಳೆಯರ ಪ್ರತಿಭೆ ಪ್ರದರ್ಶನ ಹಾಗೂ ವಸ್ತುಗಳ ಮಾರಾಟಕ್ಕೆ ಮೇಳವು ಉತ್ತಮ ಅವಕಾಶವನ್ನು ಕಲ್ಪಿಸಿದ್ದು, ಮಹಿಳೆಯರು ಉತ್ಸಾಹದಿಂದ ಪಾಲ್ಗೋಳ್ಳುವ ಮೂಲಕ ಮೇಳದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ವ್ಯವಸ್ಥಾಪಕ ಅವಿನಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರು ತಯಾರಿಸಿದ ವಸ್ತುಗಳ ಮಾರಟ ಹಾಗೂ ಪ್ರದರ್ಶನಕ್ಕಾಗಿ ಒಟ್ಟು 40 ಮಳಿಗೆಗಳನ್ನು ತೆರೆದಿದ್ದು, ಮಹಿಳೆಯರು ತಯಾರಿಸಿದ ವಸ್ತುಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ರೂಪಿಸಲಾಗಿದೆ ಎಂದರು. ಮಾರಾಟ ಮೇಳದಲ್ಲಿ ಮಹಿಳೆಯರು ತಯಾರಿಸಿದ ಗೃಹ ಉಪಯೋಗಿ ವಸ್ತುಗಳು, ಕರಕುಶಲ ವಸ್ತುಗಳು, ಟೆರೇಕೋಟಾ ವಸ್ತುಗಳು, ಕೃತಕ ಆಭರಣ, ಆಯುರ್ವೇದಿಕ್ ಉತ್ಪನ್ನಗಳು, ಬೇಕರಿ ಉತ್ಪನ್ನಗಳು, ಪಾಸ್ಟ್ ಫುಡ್ ಇತ್ಯಾದಿ ಉತ್ಪನ್ನಗಳು ಲಭ್ಯವಿದ್ದು, ಪ್ರತಿ ದಿನ ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ತಾಲೂಕು ಪಂಚಾಯತ್ ಕಾರ್ಯನಿರ್ವಹಕ ಅಧಿಕಾರಿ ದೇವರಾಜ್ ಹಿತ್ತಲಕೊಪ್ಪ, ಉಡುಪಿ ತಾಲೂಕು ಒಕ್ಕೂಟದ ಅಧ್ಯಕ್ಷೆ ಲತಾ ಅಶೋಕ್, ಕುಂದಾಪುರ ತಾಲೂಕು ಒಕ್ಕೂಟದ ಅಧ್ಯಕ್ಷೆ ವಿಜಯಾ ಗಾಣಿಗ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಯೋಜನಾ ನಿರ್ದೇಶಕ ಕರೀಂ ಅಸಾದಿ ಸ್ವಾಗತಿಸಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ನವ್ಯಾ ನಿರೂಪಿಸಿದರು. ತಾಲೂಕು ವ್ಯವಸ್ಥಾಪಕ ಪ್ರಶಾಂತ್ ವಂದಿಸಿದರು.