ಉಡುಪಿ, ಮಾ.6: ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆಗೆ ಸೇವಾ ಮನೋಭಾವವನ್ನು ರೂಢಿಸಿಕೊಂಡು ಆರೋಗ್ಯಕರ ಸಮಾಜ ಕಟ್ಟಲು ಅಳಿಲು ಸೇವೆಗಳನ್ನು ಮಾಡಬೇಕು ಎಂದು ಶಾಸಕ ಯಶಪಾಲ್ ಎ ಸುವರ್ಣ ಹೇಳಿದರು. ಅವರು ಬುಧವಾರ ನಗರದ ಬ್ರಹ್ಮಗಿರಿಯ ರೆಡ್ ಕ್ರಾಸ್ ಭವನದಲ್ಲಿ ಮಂಗಳೂರು ವಿಶ್ವ ವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ವಾರ್ಷಿಕ ವಿಶೇಷ ಶಿಬಿರಕ್ಕೆ ಭೇಟಿ ನೀಡಿ ಮಾತನಾಡುತ್ತಿದ್ದರು. ಕಾಲೇಜುಗಳಲ್ಲಿ ನಡೆಯುವ ರಾಷ್ಟ್ರೀಯ ಸೇವಾ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ಸಾಮಾಜಿಕವಾಗಿ, ವ್ಯಕ್ತಿಗತವಾಗಿ ಅಭಿವೃದ್ಧಿ ಹೊಂದುವುದರ ಜೊತೆಗೆ ಸಾಮಾಜಿಕ ಕಳಕಳಿ ವಿದ್ಯಾರ್ಥಿಗಳಲ್ಲಿ ಬೆಳೆಯುತ್ತದೆ ಎಂದರು. ದೇಶದ ಅಭಿವೃದ್ಧಿಗೆ ವಿದ್ಯಾರ್ಥಿಗಳ ಕೊಡುಗೆ ಅಪಾರವಾಗಿದ್ದು, ಶಿಬಿರದಲ್ಲಿ ಉತ್ತಮವಾಗಿ ಭಾಗವಹಿಸುವುದರೊಂದಿಗೆ ಅನುಭವವು ಹೊಂದಲು ಸಾಧ್ಯವಾಗುತ್ತದೆ ಎಂದ ಅವರು, ಈ ಏಳು ದಿನಗಳ ವಾರ್ಷಿಕ ಶಿಬಿರದಲ್ಲಿ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ಕನ್ನಡ ವಿಭಾಗ ಮುಖ್ಯಸ್ಥೆ ಪ್ರೊ. ನಿಕೇತನ, ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥೆ ವಿದ್ಯಾ ಶೆಟ್ಟಿ, ವಿದ್ಯಾರ್ಥಿನಿ ಪ್ರೀತಿ ಶೆಟ್ಟಿ, ಎನ್.ಎಸ್.ಎಸ್ ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಗಿಡ ನೆಟ್ಟು, ರೆಡ್‌ಕ್ರಾಸ್ ಭವನದ ಸುತ್ತಮುತ್ತ ಸ್ವಚ್ಛಗೊಳಿಸಲಾಯಿತು.