ಕುಂದಾಪುರ, ಮಾ.2: ಸಮುದಾಯ ವೈದ್ಯಕೀಯ ವಿಭಾಗ, ಕೆಎಂಸಿ, ಕಸ್ತೂರ್ಬಾ ಆಸ್ಪತ್ರೆ, ಮಾಹೆ ಮಣಿಪಾಲ ಮತ್ತು ಮಾಹೆ ವಾಣಿಜ್ಯ ವಿಭಾಗ ಹಾಗೂ ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್ ಪ್ರಾಜೆಕ್ಟ್ (ಐಸಿಎಸ್‌ಎಸ್‌ಆರ್), ನವದೆಹಲಿ, ಭಾರತೀಯ ಜನೌಷಧಿ ಕೇಂದ್ರ, ತೆಕ್ಕಟ್ಟೆ, ಜೈಂಟ್ಸ್ ಗ್ರೂಪ್, ಬ್ರಹ್ಮಾವರ, ತೆಕ್ಕಟ್ಟೆ ಗ್ರಾಮ ಪಂಚಾಯತ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಂಭಾಶಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಹಾಗೂ ಜನೌಷಧಿ ಕುರಿತು ಜಾಗೃತಿ ಶಿಬಿರ ತೆಕ್ಕಟ್ಟೆ ಜನೌಷಧಿ ಕೇಂದ್ರದಲ್ಲಿ ನಡೆಯಿತು. ತೆಕ್ಕಟ್ಟೆ ಗ್ರಾ. ಪಂ. ಅಧ್ಯಕ್ಷೆ ಶೋಭನಾ ಶೆಟ್ಟಿ ಉದ್ಘಾಟಿಸಿದರು.
ನಿರ್ದೇಶಕರು ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಸಂದೀಪ್ ಶೆಣೈ, ಪ್ರೊಫೆಸರ್ ಡಾ. ಸವಿತಾ ಬಾಸ್ರಿ, ಡಾ. ಆದಿತ್ಯ ಶೆಟ್ಟಿ, ಸಮುದಾಯ ವೈದ್ಯಕೀಯ ವಿಭಾಗ, ಕೆಎಂಸಿಯ ಸಹಾಯಕ ಪ್ರಾಧ್ಯಾಪಕರಾದ ಡಾ. ಅಖಿಲಾ ಡಿ, ತೆಕ್ಕಟ್ಟೆ ಗ್ರಾಮ ಪಂಚಾಯತ್ ಪಿಡಿಓ ಸುನಿಲ್, ಜೈಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರದ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾದ ನಿತಿನ್ ಶೆಟ್ಟಿ ಹಾಗೂ ಮಿಲ್ಟನ್ ಆಲಿವರ್, ಶ್ರೀನಾಥ್ ಕೋಟ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಸಹಕರಿಸಿದ ಮಣಿಪಾಲದ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಮತ್ತು ವಿಭಾಗ ಮುಖ್ಯಸ್ಥರಾದ ಡಾ. ಅಶ್ವಿನಿ ಕುಮಾರ್, ಪ್ರಾಧ್ಯಾಪಕರಾದ ಡಾ. ರಂಜಿತಾ ಶೆಟ್ಟಿ, ಮಾಹೆ ವಾಣಿಜ್ಯ ವಿಭಾಗದ ಡಾ. ಅಂಕಿತಾ ಹಾಗೂ ಕಸ್ತೂರ್ಬಾ ಆಸ್ಪತ್ರೆ ಹಾಗೂ ಸಮುದಾಯ ವೈದ್ಯಕೀಯ ವಿಭಾಗದ ಸಿಬ್ಬಂದಿಗಳಿಗೆ ಸಂಘಟಕರು ಕೃತಜ್ಞತೆ ಸಲ್ಲಿಸಿದರು. ಸಂಪನ್ಮೂಲ ವ್ಯಕ್ತಿ ಡಾ. ಅಖಿಲಾ ಡಿ. ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿದರು. ಕಸ್ತೂರ್ಬಾ ಆಸ್ಪತ್ರೆ, ಮಾಹೆ ಮಣಿಪಾಲದ ವತಿಯಿಂದ ನಡೆಯುತ್ತಿರುವ ವೆಲ್ ವುಮೆನ್ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, ಸಾರ್ವಜನಿಕರು ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು. ಮತ್ತೊರ್ವ ಸಂಪನ್ಮೂಲ ವ್ಯಕ್ತಿ ಡಾ. ಸವಿತಾ ಬಾಸ್ರಿ ಮಾತನಾಡಿ, ಐಸಿಎಸ್‌ಎಸ್‌ಆರ್ ಯೋಜನೆಯ ಆವಿಷ್ಕಾರದ ಕುರಿತು ಮತ್ತು ಜನೌಷಧಿ ಉತ್ಪನ್ನಗಳನ್ನು ಬಳಸುವ ಮೂಲಕ ಸಾರ್ವಜನಿಕರು ತಮ್ಮ ಆರೋಗ್ಯವನ್ನು ಹೇಗೆ ಕಾಳಜಿ ವಹಿಸಬೇಕು ಎಂಬುದರ ಕುರಿತು ತಿಳಿಸಿದರು. ಎಲ್ಲಾ ಫಲಾನುಭವಿಗಳಿಗೆ ಆರೋಗ್ಯ ಕಿಟ್ ವಿತರಿಸಲಾಯಿತು. ಸುಮಾರು 100 ಫಲಾನುಭವಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.