ಉಡುಪಿ, ಮಾ.2: ಭವಿಷ್ಯದಲ್ಲಿ ನೀರಿನ ಆಹಾಕಾರ ತಪ್ಪಿಸಲು ಪ್ರತಿಯೊಬ್ಬರೂ ತಮ್ಮ ಮನೆ ಹಾಗೂ ಜಮೀನುಗಳಲ್ಲಿ ಮಳೆ ನೀರಿನ ಕೊಯ್ಲು ಅಳವಡಿಸಿಕೊಳ್ಳುವುದು ಅತ್ಯಂತ ಸೂಕ್ತ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ಶನಿವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಅಟಲ್ ಬಿಹಾರಿ ವಾಜನೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಉದಯವಾಣಿ ಸಹಯೋಗದೊಂದಿಗೆ ನಡೆದ ಮಳೆ ನೀರು ಕೊಯ್ಲು ಕಾರ್ಯಗಾರವನ್ನು ಗಿಡಕ್ಕೆ ನೀರನ್ನು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಉಡುಪಿ ಜಿಲ್ಲೆಯು ಕರಾವಳಿ ಪ್ರದೇಶದಲ್ಲಿದ್ದು ಸಮುದ್ರ ತೀರ ಒಂದೆಡೆಯಾದರೆ, 4000 ಮಿ.ಮೀ ಕ್ಕೂ ಹೆಚ್ಚು ವಾಡಿಕೆ ಮಳೆ ಸುರಿದು 16 ಕ್ಕೂ ಹೆಚ್ಚು ನದಿಗಳು ಹರಿಯುತ್ತಿದ್ದರೂ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ ಎಂದರೆ ಇದಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಮೂಲ ಕಾರಣ. ಇದನ್ನು ಗಂಭೀರವಾಗಿ ತೆಗೆದುಕೊಂಡು ಅಂತರ್ಜಲ ಮಟ್ಟ ಹೆಚ್ಚಿಸಲು ಮಳೆ ನೀರಿನ ಕೊಯ್ಲು ಅಳವಡಿಸಿಕೊಳ್ಳಬೇಕು ಎಂದರು. ಮಳೆ ನೀರಿನ ಕೊಯ್ಲು ಅಳವಡಿಸುವುದು ಅತ್ಯಂತ ಸರಳ ಹಾಗೂ ಕಡಿಮೆ ಮೊತ್ತದಲ್ಲಿ ಸಾಧ್ಯ. ಇದನ್ನು ಅಳವಡಿಸುವುದರಿಂದ ಭವಿಷ್ಯದಲ್ಲಿ ಮುಂದಿನ ಪೀಳಿಗೆ ನೀರಿನ ಅಭಾವದಿಂದ ದೂರವಿರಲು ಸಾಧ್ಯ. ನಿರ್ಮಾಣ ಹಂತದ ಕಟ್ಟಡಗಳಲ್ಲಿ ಇದನ್ನು ಅಳವಡಿಸಲು ಮುಂದಾಗುವುದು ಸೂಕ್ತ. ಒಬ್ಬರು ಅಳವಡಿಸಿಕೊಂಡರೆ ಇದನ್ನು ನೋಡಿ ತಮ್ಮ ನೆರೆಹೊರೆಯವರು ಮತ್ತು ತಮ್ಮ ಅಕ್ಕಪಕ್ಕದ ಜಮೀನಿನವರು ಅಳವಡಿಸಲು ಮುಂದಾಗುತ್ತಾರೆ ಎಂದರು. ನಾವುಗಳು ನೀರಿನ ಬಳಕೆಯನ್ನು ಯತೇಚ್ಛವಾಗಿ ದಿನನಿತ್ಯ ಮಾಡುತ್ತಿದ್ದೇವೆ. ಅದರ ಸಂಗ್ರಹಣೆಗೆ ಒತ್ತು ಕೊಡುವುದು ಅನಿವಾರ್ಯ. ಇದು ಮಳೆ ನೀರಿನ ಕೊಯ್ಲುನಿಂದ ಮಾತ್ರ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಮೀಡಿಯಾ ನೆಟ್‌ವರ್ಕ್ನ ಸಿ.ಇ.ಓ ವಿನೋದ್ ಕುಮಾರ್ ಮಾತನಾಡಿ, ಪ್ರಾಕೃತಿಕವಾಗಿ ಸಿಗುವ ಮಳೆ ನೀರು ಹರಿದು ವ್ಯರ್ಥವಾಗದ ರೀತಿಯಲ್ಲಿ ನೋಡಿಕೊಳ್ಳುವುದು ಅನಿವಾರ್ಯ. ಅಂತರ್ಜಲ ಮಟ್ಟ ಹೆಚ್ಚಿಸಲು ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು. ಜನ ಸಾಮಾನ್ಯರು ನೀರಿನ ಬಳಕೆ ಮಿತವ್ಯಯಕ್ಕೆ ಒತ್ತು ನೀಡಬೇಕು ಎಂದರು. ಅಂತರ್ಜಲ ಮಟ್ಟ ಹೆಚ್ಚಿಸಲು ಯುವಜನರು, ಸಂಘ-ಸಂಸ್ಥೆಗಳು, ರೈತ ಸಮುದಾಯ ಸೇರಿದಂತೆ ನೀರಿನ ಬಳಕೆಯ ಅರಿವು ಹೊಂದಿರುವುದರ ಜೊತೆಗೆ ಕ್ರಿಯಾಶೀಲರಾಗಿ ಅಂತರ್ಜಲ ಮಟ್ಟ ಹೆಚ್ಚಿಸಲು ಮುಂದಾಗಬೇಕು ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಮಾತನಾಡಿ, ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ನೀರಿನ ಅಭಾವವಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ಇದರ ನಿವಾರಣೆಗೆ ಮಳೆ ನೀರು ಕೊಯ್ಲು ಅನುಷ್ಠಾನಗೊಳಿಸುವುದು ಅತ್ಯಂತ ಅವಶ್ಯ ಎಂದರು.
ಉದಯವಾಣಿ ಹಿರಿಯ ಸಹಾಯಕ ಸಂಪಾದಕ ಕುಮಾರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವರ್ಣ ನದಿ ಎರಡನೇ ಹಂತ ಯೋಜನೆ ಜಾರಿಗೆ ತರುವಾಗ ಭವಿಷ್ಯದ 25 ವರ್ಷವನ್ನು ಆಧರಿಸಿ, ಅನುಷ್ಠಾನಗೊಳಿಸಲಾಗಿತ್ತು. ಆದರೆ 15 ವರ್ಷಗಳಲ್ಲಿಯೇ ಈ ನೀರಿನ ಕೊರತೆ ನಗರಕ್ಕೆ ಆಗುತ್ತಿದೆ. ವಾರಾಹಿ ಯೋಜನೆ ರೂಪಿಸಲಾಗುತ್ತಿದೆ. ಆದರೆ, ವಾರಾಹಿ ಆಣೆಕಟ್ಟಿನಲ್ಲಿ ನೀರಿನ ಸಂಗ್ರಹದ ಕೊರತೆ ಕಾಣುತ್ತಿದೆ ಎಂದ ಅವರು, ಸಾರ್ವಜನಿಕರು ಹರಿದು ಹೋಗುವ ಮಳೆ ನೀರಿನ್ನು ಸಂಪೂರ್ಣವಾಗಿ ಜಾಣ್ಮೆಯಿಂದ ಬಳಸಿಕೊಂಡು ಮಳೆ ನೀರಿನ ಕೊಯ್ಲನ್ನು ಅಳವಡಿಸಿಕೊಳ್ಳುವುದರ ಮೂಲಕ ನೀರಿನಲ್ಲಿ ಸ್ವಾವಲಂಭಿಗಳಾಗೋಣ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಜೋಸೆಫ್ ರೊಬೆಲ್ಲೋ ಮಳೆ ನೀರು ಕೊಯ್ಲು ಅಳವಡಿಸುವ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳು, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ರೈತ ಸಂಘಟನೆಗಳು, ಇಂಜಿನಿಯರ್ಸ್ ಅಸೋಸಿಯೇಶನ್, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಮತಾ ದೇವಿ ಜಿ.ಎಸ್ ಸ್ವಾಗತಿಸಿ, ಉಷಾರಾಣಿ ನಿರೂಪಿಸಿ, ಉಪ ಮುಖ್ಯ ವರದಿಗಾರ ರಾಜು ಖಾರ್ವಿ ವಂದಿಸಿದರು.