ಬ್ರಹ್ಮಾವರ, ಫೆ.28: ಬಾರ್ಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುನಾವಣಾ ಸಾಕ್ಷರತಾ ಸಮಿತಿ ಮತ್ತು ಕ್ರೀಡೆ, ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಸಂವಿಧಾನವನ್ನು ಅರ್ಥೈಸಿಕೊಳ್ಳುವ ಪ್ರಾಮುಖ್ಯತೆಯ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ರಮೇಶ್ ಆಚಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅವರು ಮಾತನಾಡುತ್ತಾ, ನಮ್ಮ ಸಂವಿಧಾನದಿಂದ ನಮಗೆ ಕಾನೂನುಬದ್ಧವಾಗಿ ದೊರೆಯಲ್ಪಟ್ಟ ಹಕ್ಕು ಮತ್ತು ಕರ್ತವ್ಯಗಳನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನ ಈ ಪ್ರಜಾಪ್ರಭುತ್ವ ದೇಶದಲ್ಲಿ ನಮಗೆ ಸುರಕ್ಷಿತ ಭಾವನೆಯನ್ನು ತಂದು ಕೊಟ್ಟಿದೆ ಎಂದರು.
ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಶ್ರೀಕಾಂತ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಜಗತ್ತಿನ ಅತ್ಯಂತ ದೊಡ್ಡ ಸಂವಿಧಾನವಾದ ಭಾರತದ ಸಂವಿಧಾನದ ಮಹತ್ವವನ್ನು ಬೇರೆ ಬೇರೆ ದೇಶಗಳ ಸಂವಿಧಾದಾನದ ಹಿನ್ನೆಲೆಯಲ್ಲಿ ನಿರೂಪಿಸುತ್ತಾ, ವಿದ್ಯಾರ್ಥಿಗಳು ಸಂವಿಧಾನವನ್ನು ಓದುವುದು ಅತ್ಯಂತ ಅವಶ್ಯಕವೆಂದರು. ತೃತೀಯ ಬಿಕಾಂನ ನಂದಿಲ ಸ್ವಾಗತಿಸಿ, ಶ್ರೀಜಾ ವಂದಿಸಿದರು. ಸುಜನ್ ಕಾರ್ಯಕ್ರಮ ನಿರೂಪಿಸಿದರು.