ಮಂಗಳೂರು, ಫೆ.26: ರಾಜ್ಯದಲ್ಲಿ ಹಳಿ ತಪ್ಪಿದ ಆಡಳಿತ ನಿರ್ವಹಣೆಯಿಂದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ವರ್ಷ ತುಂಬುವುದರೊಳಗೆ ಮತದಾರ ಪ್ರಭುಗಳು ತೀವ್ರ ಹತಾಶಗೊಂಡಿದ್ದಾರೆ. ಈಗ ಆಡಳಿತ ನಿರ್ವಹಿಸುತ್ತಿರುವುದು ಕಾಂಗ್ರೆಸ್ಸೋ ಅಥವಾ ಸರ್ಕಾರಿ ಅಧಿಕಾರಿಗಳೋ ಎಂಬುದರ ಬಗ್ಗೆಯಂತೂ ಪ್ರತಿಯೊಬ್ಬರಿಗೂ ಸಂದೇಹವುಂಟಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದರು.
ಶಾಲೆಗಳ ಪ್ರವೇಶ ದ್ವಾರದಲ್ಲಿದ್ದ ರಾಷ್ಟ್ರಕವಿ ಕುವೆಂಪು ಅವರ ‘ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ’ ಎಂಬ ಸಾಲುಗಳನ್ನು ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು’ ಎಂದು ಬದಲಾವಣೆ ಮಾಡಿದ್ದನ್ನು ರಾಜ್ಯದ ಜನರೇ ಧೈರ್ಯವಾಗಿ ಪ್ರಶ್ನಿಸಿದ ಪರಿಣಾಮ ಮತ್ತೆ ಹಳೆಯ ವಾಕ್ಯವನ್ನೇ ಮುಂದುವರಿಸಲಾಯಿತು. ಇದು ಸರ್ಕಾರವನ್ನು ಗಣನೆಗೆ ತೆಗೆದುಕೊಳ್ಳದೇ ಕೇವಲ ಇಲಾಖೆಯ ಅಧಿಕಾರಿಗಳ ಮಟ್ಟದಲ್ಲೇ ನಡೆದ ಬದಲಾವಣೆಯೆಂದು ಸಮಜಾಯಿಷಿ ನೀಡಿರುವ ಕಾಂಗ್ರೆಸ್ ಸರ್ಕಾರ, ಅಧಿಕಾರಿಗಳ ಮುಂದೆ ಮಂಡಿಯೂರಿ ತನ್ನ ಅಸಹಾಯಕತೆಯನ್ನು ತಾನೇ ರಾಜ್ಯದ ಜನತೆಯ ಮುಂದೆ ಒಪ್ಪಿಕೊಂಡಂತಾಗಿದೆ ಎಂದು ಹೇಳಿದರು. ರಾಜ್ಯದ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ ಎಂದು ಲಿಖಿತ ರೂಪದಲ್ಲಿ ಹೇಳಿಕೆ ನೀಡಿರುವ ಸರ್ಕಾರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನಾಡಗೀತೆ ಕಡ್ಡಾಯ ಎಂದು ಮರು ಸ್ಪಷ್ಟನೆ ನೀಡಿತು. ಸರ್ಕಾರ ಹೀಗೆ ಒಂದಲ್ಲ ಒಂದು ಗೊಂದಲಗಳಲ್ಲೇ ನಿರತವಾಗಿದ್ದರೆ ರಾಜ್ಯದ ನೈಜ ಸಮಸ್ಯೆಗಳೆಡೆಗೆ ಗಮನ ಹರಿಸುವುದು ಯಾವಾಗ ಎಂದು ಶಾಸಕರು ಪ್ರಶ್ನಿಸಿದರು.
ದೇವರನ್ನೇ ನಂಬದವರು, ದೇವರ ಅಸ್ತಿತ್ವವನ್ನೇ ಪ್ರಶ್ನಿಸುವವರು, ಈಗ ದೇವಾಲಯದ ಹುಂಡಿಗೆ ಕೈ ಹಾಕಿರುವುದು ಹಾಸ್ಯಾಸ್ಪದ. ಬರಿದಾಗಿರುವ ರಾಜ್ಯದ ಬೊಕ್ಕಸ ತುಂಬಿಸಿಕೊಳ್ಳಲು ಹಿಂದೂ ದೇವಾಲಯಗಳ ಆದಾಯದ ಮೇಲೆ ಸರ್ಕಾರ ಕಣ್ಣು ಹಾಕಿದ್ದು, ದೇವಸ್ಥಾನಗಳ ಆದಾಯದಲ್ಲಿ ಶೇ.10 ಹಾಗೂ ಶೇ.5 ರಷ್ಟನ್ನು ಬಾಚಿಕೊಳ್ಳಲು ಸಿದ್ದವಾಗಿ ನಿಂತಿದೆ. ಆಸ್ತಿಕ ವರ್ಗ ಭಕ್ತಿಯಿಂದ ದೇವಸ್ಥಾನಕ್ಕೆ ಸಲ್ಲಿಸುವ ಕಾಣಿಕೆಯು ದೇವಸ್ಥಾನದ ಅಭಿವೃದ್ಧಿಗೆ ಹಾಗೂ ಭಕ್ತರಿಗೆ ಅನುಕೂಲ ಕಲ್ಪಿಸುವ ಕಾರ್ಯಕ್ಕೆ ವಿನಿಯೋಗವಾಗಬೇಕೇ ಹೊರತು, ಸರ್ಕಾರದ ಬೇರೊಂದು ಕಾರ್ಯಕ್ಕಲ್ಲ. ಅನ್ಯ ಧರ್ಮಗಳ ಆದಾಯದ ಮೇಲಿಲ್ಲದ ಕಣ್ಣು ಹಿಂದೂ ದೇವಾಲಯಗಳ ಮೇಲೆ ಮಾತ್ರ ಏಕೆ? ಈಗಾಗಲೇ ಪಂಚ ರಾಜ್ಯಗಳ ಚುನಾವಣೆಗೆ, ರಾಜ್ಯ ಸರ್ಕಾರದ ವೈಭೋಗದದಿಲ್ಲಿ ಯಾತ್ರೆಗೆ, ಕೇರಳದ ರಾಹುಲ್ ಗಾಂಧಿ ಪ್ರತಿನಿಧಿಸುವ ಕ್ಷೇತ್ರದಲ್ಲಿ ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಗೆ, ಹೀಗೆ ನಾನಾ ರೀತಿಯಲ್ಲಿ ರಾಜ್ಯದ ಜನರ ತೆರಿಗೆಯ ಹಣ ದುರ್ಬಳಕೆಯಾಗಿರುವುದು ಕಣ್ಣ ಮುಂದೆ ಇದೆ. ಹಾಗಾಗಿ ದೇವಾಲಯದ ಹಣವನ್ನೂ ಸಹ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.