ಉಡುಪಿ, ಫೆ.21: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗದ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ 1996 ಮತ್ತು ಕರ್ನಾಟಕ ನಿಯಮಗಳು 2006 ರಡಿ 10 ಕ್ಕಿಂತ ಹೆಚ್ಚಿನ ಕಾರ್ಮಿಕರನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಲ್ಲಿ ಕಡ್ಡಾಯವಾಗಿ ಕಟ್ಟಡ ಮಾಲೀಕರು, ನಿಯೋಜಕರು ಹಾಗೂ ಗುತ್ತಿಗೆದಾರರು ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಸಂಸ್ಥೆಯನ್ನಾಗಿ ನೋಂದಾಯಿಸಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ನಿಗಧಿತ ಶುಲ್ಕವನ್ನು ಭರಿಸಿ, ನೋಂದಣಿ ಪ್ರಮಾಣ ಪತ್ರವನ್ನು ಕಾರ್ಮಿಕ ಇಲಾಖೆಯಿಂದ ಪಡೆಯುವುದು ಕಡ್ಡಾಯವಾಗಿರುತ್ತದೆ.
ವ್ಯಾಸ್ತವ್ಯದ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ರೂ.10 ಲಕ್ಷ ನಿರ್ಮಾಣ ವೆಚ್ಚ ಮೀರಿದ ಕಟ್ಟಡ ಮತ್ತು ಯಾವುದೇ ವಾಣಿಜ್ಯ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳುವ ಕಟ್ಟಡದ ಮಾಲೀಕರು ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಸ್ಥಳೀಯ ಸಂಸ್ಥೆಯ ಪರವಾನಗಿ ಪ್ರಾಧಿಕಾರ ಕಛೇರಿಗಳಿಂದ ಆಕ್ಯುಪೆನ್ಸಿ ಸರ್ಟಿಫಿಕೇಟ್ ಅನ್ನು ಕಟ್ಟಡದ ನಿರ್ಮಾಣ ಮಾಲೀಕರು ಪಡೆಯುವ ಪೂರ್ವದಲ್ಲಿ ಕಾರ್ಮಿಕ ಅಧಿಕಾರಿ ಹಾಗೂ ಸುಂಕ ಮೌಲ್ಯಮಾಪನಾಧಿಕಾರಿಗಳಿಗೆ ಕಟ್ಟಡದ ಮಾಲೀಕರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಸುಂಕ ಕಾಯ್ದೆಯನ್ವಯ ನಮೂನೆ-1 ಹಾಗೂ ನಮೂನೆ-4 ರಲ್ಲಿ ಭರ್ತಿ ಮಾಡಿದ ಮಾಹಿತಿ ಹಾಗೂ ಅಗತ್ಯ ದಾಖಲಾತಿಯನ್ನು ಸಲ್ಲಿಸಿ, ಸುಂಕ ಮೌಲ್ಯಮಾಪನ ಆದೇಶ ಮಾಡಿಸಿಕೊಂಡು ಸುಂಕದ ಪೂರ್ಣ ಮೊತ್ತ ಪಾವತಿ ಮಾಡಿರುವ ಬಗ್ಗೆ ದೃಢಪತ್ರವನ್ನು ಪಡೆದು ಸ್ಥಳೀಯ ಸಂಸ್ಥೆಯ ಪರವಾನಗಿ ಪ್ರಾಧಿಕಾರ ಕಛೇರಿಗಳಿಂದ ಆಕ್ಯುಪೆನ್ಸಿ ಸರ್ಟಿಫಿಕೇಟ್ ಅನ್ನು ಪಡೆದುಕೊಳ್ಳುವಂತೆ ಅಪರ ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.